ವರಮಹಾಲಕ್ಷ್ಮಿ ಪೂಜಾ ಪರಂಪರೆ, ಹಿನ್ನೆಲೆ, ಮಹತ್ವ ಹಾಗೂ ಆಚಾರ ವಿಚಾರ:
ವರಲಕ್ಷ್ಮಿ ಪೂಜೆ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬವಾಗಿದ್ದು ತನ್ನದೇ ಆದ ಮಹತ್ವ ಹಾಗೂ ವೈಶಿಷ್ಟ್ಯವನ್ನು ಹೊಂದಿದೆ. ಇದು, ತಮ್ಮ ಕುಟುಂಬಗಳ ಏಳಿಗೆ ಮತ್ತು ಕಲ್ಯಾಣಕ್ಕಾಗಿ ವಿವಾಹಿತ ಮಹಿಳೆಯರು ಆಚರಿಸುವ ಒಂದು ಪ್ರಮುಖ ಆಚರಣೆಯಾಗಿದ್ದು, ಸಾಮಾನ್ಯವಾಗಿ ಶ್ರವಣ ಮಾಸದಲ್ಲಿ ಎರಡನೇ ಶುಕ್ರವಾರದಂದು ಪೂಜಾ ಕಾರ್ಯ ನಡೆಸಲಾಗುತ್ತದೆ.
ರಂಗೋಲಿ:- ಶುಕ್ರವಾರ ಬ್ರಾಹ್ಮೀ ಮುಹೂರ್ತದಲ್ಲಿ ಸ್ನಾನ ಮಾಡಿ, ಮನೆಯನ್ನು ಶುಚಿಗೊಳಿಸಿ, ಸಾಮಾನ್ಯವಾಗಿ ಅಷ್ಟದಳ ಪದ್ಮ ಅಥವಾ ಹೃದ್ರಾಯ ಕಮಲ ವಿನ್ಯಾಸ ರಂಗೋಲಿಗಳನ್ನು ಪೂಜೆಯ ಉದ್ದೇಶಿತ ಸ್ಥಳದಲ್ಲಿ ಚಿತ್ರಿಸಬೇಕು.
ಕಳಶ:- ಕಂಚಿನ ಅಥವಾ ಬೆಳ್ಳಿಯ ಪಾತ್ರೆಯನ್ನು ಶ್ರೀಗಂಧ, ಅರಿಶಿನ, ಕುಂಕುಮ, ಸುಣ್ಣ ಮತ್ತು ಕೆಂಪು ಮಣ್ಣಿನಿಂದ ಅಲಂಕಾರಗೊಳಿಸಲಾಗುವುದು. ಕಳಶಕ್ಕೆ ಕಚ್ಚಾ ಅಕ್ಕಿ, ನೀರು, ನಾಣ್ಯಗಳು, ಐದು ಬಗೆಯ ಎಲೆಗಳು (ಪಂಚ ಪತ್ರೆ), ಮತ್ತು ಒಣ ಫಲ ಪುಷ್ಪಗಳನ್ನೂ ಹಾಕಲಾಗುವುದು. ಕಳಶ ತುಂಬಲು ಬಳಸುವ ವಸ್ತುಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ ಮತ್ತು ಅರಿಶಿನ, ಬಾಚಣಿಗೆ, ಕನ್ನಡಿ, ಸಣ್ಣ ಕಪ್ಪು ಅಥವಾ ಹಸಿರು ಬಳೆಗಳು ಮತ್ತು ಕಪ್ಪು ಮಣಿಗಳು ಮತ್ತು ಇತರ ಶುಭ ವಸ್ತುಗಳನ್ನು ಒಳಗೊಂಡಿದೆ.
ಕಳಶದ ಬಾಯಿಗೆ ಮಾವಿನ ಎಲೆಗಳನ್ನು ಇಟ್ಟು, ಅರಿಶಿಣ ಕುಂಕುಮ ಲೇಪಿಸಿದ ಶಿಖೆಯಿರುವ ತೆಂಗಿನಕಾಯಿಯನ್ನು ಕಳಶದ ತುದಿಗಿಟ್ಟು ಪ್ರಾಣ ಪ್ರತಿಷ್ಟಾಪಿಸಲಾಗುತ್ತದೆ. ಈ ತೆಂಗಿನಕಾಯಿಗೆ, ಅರಿಶಿಣ ಮತ್ತು ಕುಂಕುಮ, ಗಂಧ ಲೇಪಿಸಿ ಲಕ್ಷ್ಮಿಯ ಚಿತ್ರವನ್ನು ಚಿತ್ರಿಸುವ ಪದ್ಧತಿಯೂ ಕೆಲವೆಡೆ ಇದೆ. ಈಗ ಕಳಶ ಸಾಂಕೇತಿಕವಾಗಿ ವರಮಹಾಲಕ್ಷ್ಮಿ ದೇವಿಯ ಮೂರ್ತ ಸ್ವರೂಪವೆಂದು ಭಾವಿಸಲಾಗುತ್ತದೆ.
ಪದ್ಮ ಕಮಲದ ವಿನ್ಯಾಸವನ್ನು ರಚಿಸಿ ಅದರ ಮೇಲೆ ಮರದ ಸ್ಟ್ಯಾಂಡ್ ಅನ್ನು ಇಡಲಾಗುತ್ತದೆ. ಈ ಪೀಠದ ಮೇಲೆ ಒಂದು ಕಪ್ ಅಕ್ಕಿಯನ್ನು ಹರಡಿ ಅದರ ಮೇಲೆ ಕಳಶ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಯಾವುದೇ ಶುಭ ಕಾರ್ಯಕ್ರಮದಲ್ಲೂ ಅಗ್ರ ಪೂಜೆ ಗಣೇಶನಿಗೆ ಆದ ಕಾರಣ, ಬಲ ಮೂಲೆಯಲ್ಲಿ ಒಂದು ಸಣ್ಣ ಗಣೇಶ ಚಿತ್ರವನ್ನು ಇಡಲಾಗುವುದು ಅಥವಾ ಪ್ರಮಥ ಮೂರ್ತಿಯ ವಿಗ್ರಹವನ್ನು ಇಡಲಾಗುತ್ತದೆ. ಕೆಲವು ಕಡೆ ವೀಳ್ಯದ ಎಲೆಯ ಮೇಲೆ ಇಡಿ ಅಡಿಕೆ ಇಟ್ಟು ಗರಿಕೆ ಮುಡಿಸಲಾಗುತ್ತದೆ. ಅಡಿಕೆಯನ್ನು ಗಣೇಶ ಎಂದು ನಂಬುವ ಪರಂಪರೆಯೂ ನಮ್ಮಲ್ಲಿದೆ. ಬೆಲ್ಲ ಅಥವಾ ಬಾಳೆಹಣ್ಣಿನ ತುಂಡನ್ನು ಗಣಪತಿಯ ಮುಂದೆ ನೈವೇದ್ಯಕ್ಕಾಗಿ ಇಡಲಾಗುತ್ತದೆ. ಲಕ್ಷ್ಮಿ ನಾರಾಯಣರ ಚಿತ್ರವನ್ನು ಕಳಶದ ಮುಂದೆ ಇಟ್ಟು ಪೂಜಿಸುವ ಆಚರಣೆಯೂ ಕೆಲವೆಡೆ ಇದೆ.
ಈ ವಸ್ತುಗಳು ವರಮಹಾಲಕ್ಷ್ಮಿ ಪೂಜೆಗೆ ಅಗತ್ಯವಾಗಿ ಲಭ್ಯವಿರಲೇಬೇಕು:
ಅರಿಶಿನ ಪುಡಿ, ಕುಂಕುಮ, ಶ್ರೀಗಂಧ ಅಥವಾ ಚೆಂದನ, ಮಂತ್ರಾಕ್ಷತೆ-ಅರಿಶಿಣ ಅಥವಾ ಕುಂಕುಮ ಲೇಪಿತ ಅಕ್ಷತೆ, ಬಗೆ ಬಗೆಯ ಫಲ ಪುಷ್ಪ, ತಾಂಬೂಲಗಳು, ಹತ್ತಿಯ ಗೆಜ್ಜೇವಸ್ತ್ರ, ದೈವಿಕ ಉಡುಪಾಗಿ ಹತ್ತಿಯ ಬಣ್ಣದಿಂದ ಮಾಡಿದ ಕುಂಕುಮ ಲೇಪಿತ ಮಾಲೆ, ಆಭರಣಗಳನ್ನು ಅರ್ಪಿಸಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಳಶಕ್ಕೊಂದು ಮಂಗಳಸೂತ್ರವನ್ನು ಹಾಕಬಹುದು. ಅರಿಶಿಣದ ನೀರಿನಲ್ಲಿ ಅದ್ದಿದ ಒಂಬತ್ತು ಗಂಟುಗಳನ್ನು ಹೊಂದಿರುವ ಒಂಬತ್ತು ಸಾಲಿನ ದಾರ, ಅಡಿಕೆ ಮತ್ತು ವೀಳ್ಯದ ಎಲೆಗಳು,
ಪೂಜೆಗೆ ಅಗತ್ಯವಿದ್ದಷ್ಟು ಶುದ್ಧ ನೀರು, ಆರತಿ, ಕರ್ಪೂರ, ಧೂಪದ್ರವ್ಯ ವಸ್ತುಗಳು, ಪಂಚಾಮೃತಕ್ಕೆ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ, ಹಣ್ಣುಗಳು, ನೈವೇದ್ಯಕ್ಕೆ ಭಕ್ಷ್ಯಗಳು. ಇವಿಷ್ಟೂ ವರಮಹಾಲಕ್ಷ್ಮಿ ಉಪಾಸನೆಗೆ ಅಗತ್ಯವಿರುವ ಪೂಜಾ ಪರಿಕರಗಳು.
ಮೊದಲು ವಿಘ್ನವಿನಾಶಕ ಮಂಗಳ ಮೂರ್ತಿ ಗಣೇಶ ಪೂಜೆಯೊಂದಿಗೆ ಪೂಜೆಯನ್ನು ಪ್ರಾರಂಭಿಸಬೇಕು.
ನಿಮ್ಮ ಅನುಕೂಲಕ್ಕೆ ತಕ್ಕಂತೆ ಪೂಜೆ ಮಾಡಬಹುದು, ಮನಸು ಶುದ್ಧವಾಗಿರಲಿ. ಸಕಲ ಫಲ ಪುಷ್ಪ ತಾಂಬೂಲ, ಪಂಚಾಮೃತವನ್ನು ದೇವರಿಗೆ ಅರ್ಪಿಸಿ ಅಂತಿಮವಾಗಿ ಮಂಗಳಾರತಿ ಮಾಡಿ ಮತ್ತು ಈ ಪೂಜೆಯನ್ನು ಆಚರಿಸುವ ಹಿಂದಿನ ವರಮಹಲಕ್ಷ್ಮಿ ಪೌರಾಣಿಕ ಕಥೆಯ ಹಿನ್ನೆಲೆಯನ್ನು ಪಾರಾಯಣ ಮಾಡಬಹುದು. ಪವಿತ್ರ ದಾರವನ್ನು ಪೂಜೆ ಮಾಡಿದ ಮಹಿಳೆಯರ ಬಲ ಮಣಿಕಟ್ಟಿನಲ್ಲಿ ಕಟ್ಟಬೇಕು. ಈ ದಾರವನ್ನು ಧರಿಸುವಾಗ ಆಕೆ ತನ್ನ ಕೈಯಲ್ಲಿ ಕುಂಕುಮ ಅಥವಾ ಹಣ್ಣನ್ನು ಬಲಗೈಯಲ್ಲಿ ಹಿಡಿದಿರಬೇಕು.
ಸಂಜೆ ಸಮಯದಲ್ಲಿ ಆರತಿ ಮಾಡಿ. ಮಹಾಲಕ್ಷ್ಮಿ ದೇವಿಯನ್ನು ಸ್ತುತಿಸಿ, ಶ್ಲೋಕಗಳನ್ನು ಪಠಿಸಿ, ಲಲಿತಾ ಸಹಸ್ರನಾಮ, ಭಕ್ತಿಗೀತೆಗಳನ್ನು ಹಾಡುವ ಕ್ರಮವೂ ಇದೆ. ವಿವಾಹಿತ ಮಹಿಳೆಯರನ್ನು ಮನೆಗೆ ಆಹ್ವಾನಿಸಿ ಮತ್ತು ಅವರಿಗೆ ಅರಸಿನ ಕುಂಕುಮ ನೀಡಿ ಸತ್ಕರಿಸಬೇಕು.
ಮರುದಿನ, ಅಂದರೆ ಶನಿವಾರ, ಸ್ನಾನ ಮಾಡಿದ ನಂತರ ಕಳಶವನ್ನು ನಿಧಾನವಾಗಿ ತೆಗೆದು ಕಳಶದ ಪವಿತ್ರ ನೀರನ್ನು ಮನೆಯಲ್ಲಿ ಪ್ರೋಕ್ಷಣೆ ಮಾಡಿ, ಪೂಜೆಗೆ ಬಳಸಿದ ಅಕ್ಕಿಯನ್ನು ಕುಟುಂಬ ಸದಸ್ಯರು ಮಾತ್ರ ಸೇವಿಸುವ, ಸಿಹಿ ಖಾದ್ಯವನ್ನು ತಯಾರಿಸಲು ಬಳಸಬೇಕಾಗುತ್ತದೆ.
ಕೊರೋನದ ಈ ಸಮಯದಲ್ಲಿ ನಾವು ಮಾಡುವ ಪೂಜೆ ಇತಿ ಮಿತಿಯಲ್ಲಿ ಇರಲಿ. ಆದಷ್ಟು ಹೊರಗಿನ ಅಥಿತಿಗಳು ಎಷ್ಟೇ ಹತ್ತಿರದವರಾದರು ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ. ಆಡಂಬರದ ಹತ್ತು ಹಲವು ಬಗೆಯ ಖಾದ್ಯ, ಫಲ ಪುಷ್ಪಗಳನ್ನು ಕಡಿಮೆ ಮಾಡಿ ಇತಿ ಮಿತಿಯಲ್ಲಿ ಶ್ರಾವಣ ಮಾಸದ ಮಹಾಲಕ್ಷ್ಮಿ ಪೂಜೆಯನ್ನು ಮಾಡುವಾಗ , ಶ್ರದ್ಧೆ ಭಕ್ತಿ ಇರಲಿ.