ನಮಗರಿವಿಲ್ಲದ ಸೋಲಿಗರ ರೊಟ್ಟಿ ಹಬ್ಬವೆಂಬ ಪಾರಂಪರಿಕ ಆಚರಣೆ, ಕಟ್ಟುಪಾಡು, ಸಂಪ್ರದಾಯದ ಸೊಗಡು: Marjala manthana Festival Soliga
ಜಾಗತಿಕ ಔದ್ಯಮಿಕ ಮತ್ತು ವಾಣಿಜ್ಯ ಅಭಿವೃದ್ಧಿ ಎನ್ನುವ ಮಹಾ ಸಂತೆಯಲ್ಲಿ ಕಳೆದು ಹೋದ ಸಣ್ಣಪುಟ್ಟ ಬುಡಕಟ್ಟು ಸಂಸ್ಕೃತಿಗಳೆಷ್ಟೋ! ಲೆಕ್ಕವಿಟ್ಟವರಾರು. ಗ್ಲೋಬಲ್ ಲೀಡರ್ ಶಿಪ್, ಜಿಡಿಪಿ, ಎಫ್.ಡಿ.ಐ, ವರ್ಲ್ಡ್ ಟ್ರೇಡ್, ವಾಲ್ ಮಾರ್ಟ್ ಮುಂತಾದ ಈ ಶತಮಾನದ ಹುಚ್ಚು ಸಾಯಿಸುತ್ತಿರುವುದು ನಮ್ಮ ನೆಮ್ಮದಿಯ ಬದುಕನ್ನು ಮಾತ್ರವಲ್ಲ, ನೂರಾರು ತಲೆಮಾರುಗಳಿಂದ ನಡೆದು ಬಂದಿದ್ದ ಅತ್ಯಂತ ಅಪೂರ್ವ ಸಾಂಸ್ಕೃತಿಕ ಸಿರಿವಂತಿಕೆ ಮತ್ತು ವಿಶಿಷ್ಟವಾದ ನಂಬಿಕೆ ಆಚರಣೆ ಮತ್ತು ಕಟ್ಟುಪಾಡುಗಳನ್ನು. Marjala manthana Festival Soliga
ಅಂತಹದ್ದೇ ಒಂದು ವಿರಳ ಆಚರಣೆ ನಮ್ಮ ಚಾಮರಾಜನಗರ ಜಿಲ್ಲೆಯ ಸುತ್ತಮುತ್ತಾ ಮಾತ್ರ ಹೆಚ್ಚಾಗಿ ಕಾಣಸಿಗುವ ಅರಣ್ಯವಾಸಿ ಬುಡಕಟ್ಟು ಸೋಲಿಗರ ರೊಟ್ಟಿಹಬ್ಬ. ಗ್ಲೋಬಲೈಸೇಷನ್ ಅಬ್ಬರದಲ್ಲಿ ಕರಗುತ್ತಿರುವ ರೊಟ್ಟಿಹಬ್ಬದ ಕುರಿತಾದ ವಿಶೇಷ ಕುತೂಹಲಕಾರ ಮಾಹಿತಿಗಳನ್ನು ಕಲೆಹಾಕುತ್ತಿದ್ದಾಗ ನನಗರಿವಿಲ್ಲದಂತೆ ಒಮ್ಮೆ ಅಬ್ಬಾ! ಎನ್ನುವ ಉದ್ಘಾರ ಹೊಮ್ಮಿದರೇ, ಈ ಸಂಸ್ಕೃತಿಯ ರಕ್ಷಣೆಗೆ ನಾವೇ ಮನಸು ಮಾಡುತ್ತಿಲ್ಲವಲ್ಲ ಎನ್ನುವ ನಿಟ್ಟುಸಿರು ಸಹ ಹೊರಬಿತ್ತು.
ಸೋಲಿಗರೆಂದರೆ ಯಾರು ಗೊತ್ತೇ?
ಕರ್ನಾಟಕದ ಮೂಲ ಬುಡಕಟ್ಟು ಜನಾಂಗಗಳಲ್ಲಿ ಜೇನುಕುರುಬರು, ಹಾಲುಕುರುಬರು, ಕಾಡು ಕುರುಬರು, ಹಾಲಕ್ಕಿ ಒಕ್ಕಲಿಗರು, ಸಿಳ್ಳೆಕ್ಯಾತರು, ಹಕ್ಕಿ ಪಕ್ಕಿಗಳಂತೆಯೇ ಸೋಲಿಗರೂ ಸಹ ಒಂದು ಪ್ರತ್ಯೇಕ ವಿಶಿಷ್ಟ ಆಚರಣೆಗಳ ಬುಡಕಟ್ಟು ಸಮುದಾಯ. ಇವರು ಹೆಚ್ಚಾಗಿ ಬದುಕಿರುವುದೇ ಮೈಸೂರು ಮತ್ತು ಚಾಮರಾಜನಗರ ಸುತ್ತಮುತ್ತ ಬಿಟ್ಟರೇ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ. ಕೊಂಚ ಮಟ್ಟಿಗೆ ಸೋಲಿಗರು ಶೃಂಗೇರಿಯ ಕಾಡುಗಳಲ್ಲೂ ಇದ್ದರು ಎಂಬ ಮಾತುಗಳು ಕೇಳಿಬಂದಿವೆ ಅನ್ನುವುದನ್ನು ಬಿಟ್ಟರೇ ಸೋಲಿಗರ ಪೋಡುಗಳು ಹೆಚ್ಚಾಗಿರುವುದೇ ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ಸತ್ಯಮಂಗಲಂ ಅರಣ್ಯ, ಕೊಳ್ಳೇಗಾಲದ ಗಾಜನೂರು, ಪುಣಜೂರು ಮತ್ತು ಯಳಂದೂರು ತಾಲೂಕಿನ ವ್ಯಾಪ್ತಿಯಲ್ಲಿ.
ಶಕುನಗಳನ್ನು ನಂಬಿ ತಮ್ಮ ಪೋಡುಗಳನ್ನು (ಸೋಲಿಗರ ವಸತಿ ಸಮುಚ್ಛಯ ಅಥವಾ ಹಾಡ್ಯಗಳನ್ನು ಪೋಡು ಎನ್ನುತ್ತಾರೆ) ನಿರ್ಮಿಸಿಕೊಂಡ ಸೋಲಿಗರ ಭಾಷೆ ಶೋಲಗ ಎನ್ನುತ್ತಾರಾದರೂ, ಇವರೀಗ ಕನ್ನಡ ಮತ್ತು ತಮಿಳು ಮಾತಾಡುತ್ತಾರೆ. ತಮ್ಮ ಮೂಲಭಾಷೆಯನ್ನು ಸಾಕಷ್ಟು ಪರಿವರ್ತಿಸಿಕೊಂಡಿದ್ದಾರೆ. ಈ ಸೋಲಿಗರ ಮೂಲ ಪುರುಷ ನೀಲಯ್ಯ ಮೂಲ ಮಹಿಳೆ ಸಂಕಮ್ಮ ಎನ್ನುವ ನಂಬಿಕೆ ಇವರಲ್ಲಿದೆ. ಮಲೆ ಮಾದೇಶ್ವರನ ಒಕ್ಕಲೆಂದು ತಮ್ಮನ್ನು ತಾವು ಕರೆದುಕೊಳ್ಳುವ ಇವರ ಮೂಲ ದೇವರು ಜಡೇಸ್ವಾಮಿ, ಕೊಂಬಿನ ಬಸಪ್ಪ, ಬಿಲ್ಲಯ್ಯ, ಕಾರಯ್ಯ, ಬಿಳಿಗಿರ ರಂಗನಾಥ ಸ್ವಾಮಿಯೂ ಇವರಿಗೆ ದೇವರೆ. ದೇವರೆನ್ನುವುದಕ್ಕಿಂತ ರಂಗನಾಥ ಸೋಲಿಗರಿಗೆಲ್ಲರಿಗೂ ಭಾವ.
ಸೋಲಿಗರಲ್ಲೂ ಪಂಗಡಗಳಾಗಿವೆ. ಮೂಲತಃ ಕಾಡು ಸೋಲಿಗರು ಮತ್ತು ಮಲೆ ಸೋಲಿಗರಾಗಿದ್ದ ಇವರು ಈಗ ಉರುಳಿ ಸೋಲಿಗರು, ಕಾಕನಕೋಟೆಯ ವಾಸಿ ಉರುಬತ್ತಿ ಸೋಲಿಗರು ಮತ್ತು ಗುಂಡ್ಲುಪೇಟೆಯ ಬುರುಡೆ ಸೋಲಿಗರಾಗಿ ಹಂಚಿಹೋಗಿದ್ದಾರೆ. ದಾಖಲೆಗಳ ಪ್ರಕಾರ ಇವರ ಜನಸಂಖ್ಯೆ 20 ಸಾವಿರ ಆದರೆ ಮೂಲ ಸೋಲಿಗರು ಎಂದು ಗುರುತಿಸಿಕೊಳ್ಳುವವರು ಐದಾರು ಸಾವಿರವಿರಬಹುದು ಎನ್ನುತ್ತಾರೆ ಸೋಲಿಗರನ್ನು ಅಧ್ಯಯನ ಮಾಡಿರುವ ವನ್ಯಜೀವಿ ಮತ್ತು ಪರಿಸರ ಕಾರ್ಯಕರ್ತ ವಲ್ಲೀಶ್ ವಾಸುಕಿ.
ಏಳುಕುಲದ ಸೋಲಿಗರು ಮತ್ತು ಐದು ಕುಲದ ಸೋಲಿಗರು ಎನ್ನುವ ಭಿನ್ನತೆಯೂ ಇವರಲ್ಲಿದೆ. ಐದುಕುಲದ ಸೋಲಿಗರಲ್ಲಿ ಸೂರ್ಯನಕುಲ, ಬೆಳ್ಳರಕುಲ, ಜೇನುಕುಲ, ಆಲುರ ಕುಲ, ತೆನೆಯರ ಕುಲ, ಸಕಲರ ಕುಲ ಮತ್ತು ಕುಂಬಳ ಕುಲಗಳು ಇತ್ಯಾದಿಗಳಿದ್ದರೇ, ಏಳುಕುಲದವರಲ್ಲಿ ಹಾಲ್ಗುಲ, ಬೆಳ್ಳಿಕುಲ, ಎಂಬೆರಡು ವಿಧಗಳಿವೆ.
ಸಾಮಾನ್ಯವಾಗಿ ಸೋಲಿಗರು ರಾಗಿ ಮತ್ತು ಕೆಲವು ದಾನ್ಯಗಳನ್ನು ಬೆಳೆಯುತ್ತರೆ. ಈಗೀಗ ಕಾಫಿ ಕೃಷಿ ಸಹ ಮಾಡುತ್ತಾರೆ. ಅವರೇಕಾಳು, ಸಿಹಿಗುಂಬಳ, ಸೌತೆಕಾಯಿ ಮುಂತಾದ ತರಕಾರಿಗಳನ್ನೂ ಬೆಳೆಯುತ್ತಿದ್ದಾರೆ. ಇವರಿಗೆ ಅತ್ಯಂತ ಅಪರೂಪದ ಅದ್ಭುತ ಔಷಧೀಯ ಮಹತ್ವವುಳ್ಳ ಗಿಡಮೂಲಿಕೆಗಳ ಬಗ್ಗೆ ಅಪಾರ ಜ್ಞಾನವಿದೆ. ಕಾಡು ಪ್ರಾಣಿಗಳ ಜಾಡಿನ ವಾಸನೆಯ ನಡುವೆಯ ಬದುಕುವ ಪರಿಣಿತಿಯಿದೆ. ಕಾಡಿನಲ್ಲಿ ಜೇನು ಸಂಗ್ರಹಿಸುತ್ತಿದ್ದ ಸೋಲಿಗರು ಈಗ ಪೆಟ್ಟಿಗೆಯಲ್ಲಿ ನಸ್ರಿಜೇನು ಸಾಕಲು ಸಹ ಆರಂಭಿಸಿದ್ದಾರೆ. ಸೋಲಿಗರಲ್ಲಿ ಈಗ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ನಾಗರೀಕ ಪ್ರಜ್ಞೆ ಬಂದಿದೆ. ಈಗೀಗ ಮೈಸೂರಿನವರೆಗೂ ಬಂದು ಓದಿನ ಆಸಕ್ತಿ ಇರುವ ಮಕ್ಕಳು ತಮ್ಮ ಶಿಕ್ಷಣ ಕಲಿಯುತ್ತಿದ್ದಾರೆ.
ಸೋಲಿಗರ ರೊಟ್ಟಿಹಬ್ಬ ಎನ್ನುವ ವಿಸ್ಮಯ:
ಸಾಮಾನ್ಯವಾಗಿ ಶಿವರಾತ್ರಿ ಕಳೆದು ಸುಗ್ಗಿ ಕಾಲ ಸಂಕ್ರಾಂತಿ ಹಬ್ಬದ ವೇಳೆ ಒಂದೆರಡು ತಿಂಗಳು ಸತತವಾಗಿ ನಿರ್ದಿಷ್ಟವಾಗಿ ಗೊತ್ತುಮಾಡಿದ ದಿನಗಳಂದು ಸೋಲಿಗರ ವಿವಿಧ ಪೋಡುಗಳಲ್ಲಿ ಈ ರೊಟ್ಟಿ ಹಬ್ಬ ವಿಜೃಂಭಣೆಯಿಂದ ಜರುಗುತ್ತದೆ. ಸೋಲಿಗರು ವರ್ಷಾವಧಿ ತಾವು ಬೆಳೆದ ಬೆಳೆಯನ್ನು ತಮ್ಮ ಕುಲದೈವಕ್ಕೆ ಅರ್ಪಿಸಿ ಪೂಜಿಸುವ ಈ ಸುಗ್ಗಿಹಬ್ಬಕ್ಕೂ ಮುನ್ನ ಬಿಳಿಗಿರಿ ರಂಗನಾಥನ ದೇವಾಲಯದಲ್ಲಿ ಚಿಕ್ಕ ಜಾತ್ರೆ ಶುರುವಾಗುತ್ತದೆ. ಈ ಚಿಕ್ಕ ಜಾತ್ರೆಯಿಂದ ದೊಡ್ಡ ಜಾತ್ರೆಯ ನಡುವಣ ಅವಧಿಯಲ್ಲಿ ನಡೆಯುತ್ತದೆ ರೊಟ್ಟಿಹಬ್ಬ.
ಬಿಳಿಗಿರಿ ರಂಗನ ಬೆಟ್ಟದ ಸುತ್ತಮುತ್ತಲೂ ಎಲ್ಲೆಲ್ಲಿ ಎಲ್ಲಿ ಪೋಡುಗಳಿವೆಯೋ ಅಲ್ಲಲ್ಲಿ ರೊಟ್ಟಿಹಬ್ಬ ನಡೆಯುತ್ತದೆ. ಗೊಂಬೆಗಾಲು ಪೋಡು, ಪುರಾಣಿ, ಬುರುಡೆಬಂಗ್ಲೆ, ಚಿಕ್ಕ ಸಂಪಿಗೆ, ದೊಡ್ಡ ಸಂಪಿಗೆ, ಜೋಡಿಗೆರೆ ಈ ಸುತ್ತಮುತ್ತಲೂ ಎಲ್ಲೆಲ್ಲಿ ಸೋಲಿಗ ಗಿರಿಜನರು ವಾಸವಿರುತ್ತಾರೋ ಅಲ್ಲಲ್ಲಿ ರೊಟ್ಟಿ ಹಬ್ಬ ಅತ್ಯಂತ ಸಂಭ್ರಮ ಸಡಗರಗಳಿಂದ ನಡೆಯುತ್ತದೆ. ಇದು ಸೋಲಿಗರ ಪಾರಂಪರಿಕ ವಾರ್ಷಿಕ ಹಬ್ಬ. ಒಂದು ಪೋಡಿನಲ್ಲಿ ಸಾಮಾನ್ಯವಾಗಿ 3 ದಿನ ನಡೆಯುತ್ತದೆ ರೊಟ್ಟಿಹಬ್ಬ. ಸಂಕ್ರಾಂತಿಯಿಂದ ಶುರುವಾಗುತ್ತದೆ. ದೊಡ್ಡ ಜಾತ್ರೆ ಅಂದರೆ ಯಗಾದಿಯ ತನಕವೂ ಈ ರೊಟ್ಟಿ ಹಬ್ಬ ವಿವಿಧ ಪೋಡುಗಳಲ್ಲಿ ನಡೆಯುತ್ತದೆ.
ಬಿಳಿಗಿರಿ ರಂಗನ ಬೆಟ್ಟದ ಸುಮಾರು 600 ಚದರ ಕಿಲೋಮೀಟರ್ ಸುತ್ತಮುತ್ತಲಲ್ಲಿ ಎಲ್ಲಿ ಸೋಲಿಗರಿರುತ್ತಾರೋ ಅಲ್ಲೆಲ್ಲಾ ಈ ರೊಟ್ಟಿ ಹಬ್ಬ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕೊಳ್ಳೆಗಾಲ ಸಮೀಪದ ಪುಣಜೂರು, ಯಳಂದೂರು ತಾಲೂಕಿನ 4 ಪೋಡುಗಳು, ಜೋಡಿಗೆರೆ, ಬೈಲೂರು, ಬೇಡುಗುಳಿ, ಹೊಸಪೋಡುಗಳಲ್ಲಿ ರೊಟ್ಟಿ ಹಬ್ಬದ ವೈಭವ ಈಗಲೂ ಕಾಣಬಹುದು.
ರೊಟ್ಟಿ ಹಬ್ಬದ ಆಚರಣೆಯ ವಿಶೇಷ;
ರೊಟ್ಟಿ ಹಬ್ಬದ ಮುಖ್ಯ ದಿನ ದೊಡ್ಡದಾಗಿ ಕೊಂಡ ಹಾಯಿಸುವ ಕಾರ್ಯಕ್ರಮ ಸಂಜೆ ಇರುತ್ತದೆ. ಅ ದಿನ ಬೆಳಗ್ಗೆ ಕೊಂಡ ಹಾಕಿದ ನಂತರ ಕಾಡಲ್ಲಿ ತೇಗದ ಎಲೆ, ಮುತ್ತುಗದ ಎಲೆಯಂತಹ ದೊಡ್ಡ ದೊಡ್ಡ ಎಲೆಗಳನ್ನು ತರುತ್ತಾರೆ. ವರ್ಷಪೂರ್ತಿ ಬೆಳೆದ ತಮ್ಮ ಬೆಳೆಗಳನ್ನು ಎಲ್ಲರ ಮನೆಯಿಂದ ತಂದು ರಾಶಿ ಹಾಕುತ್ತಾರೆ. ಅದನ್ನು ಹಿಟ್ಟು ಮಾಡುತ್ತಾರೆ. ನಂತರ ಆ ಎಲೆಗಳ ಮೇಲೆ ರಾಗಿ ಮುಂತಾದ ಧಾನ್ಯಗಳ ರೊಟ್ಟಿ ತಟ್ಟಿ ಕೆಂಡದ ಮೇಲೆ ಹಾಕಿ ಬೇಯಿಸುತ್ತಾರೆ. ಹಾಗೆ ಬೇಯಿಸಿದ್ದನ್ನು ಪ್ರಸಾದ ಎಂದು ಹಂಚುತ್ತಾರೆ. ಯಾರು ಏನೇ ಬೆಳೆದರೂ ದೇವರಿಗೆ ನೈವೇದ್ಯ ಕೊಡಲೇಬೇಕು.
ಈ ರೊಟ್ಟಿ ಹಬ್ಬದ ಇನ್ನೊಂದು ವಿಶೇಷ ಎಂದರೆ ಸಂಜೆಯಿಂದ ಮಾರನೆಯ ಬೆಳಗ್ಗೆಯವರೆಗೂ ಡೋಲು ಬಡಿದುಕೊಂಡು ಸೋಲಿಗರು ತಮ್ಮ ಜನಪದ ನೃತ್ಯ ಮಾಡುತ್ತಾರೆ. ‘ಗೊರು ಗೊರುಕ ಗೊರುಕಾನ’ ಎನ್ನುವ ಜನಪದ ಹಾಡು ಈ ಸೋಲಿಗರದ್ದೇ. ಈ ಹಾಡು ಹಾಡುತ್ತಾ ರಾತ್ರಿಯಿಡೀ ಕುಣಿಯುತ್ತಲೇ ಇರುತ್ತಾರೆ. ತಾವೇ ತಯಾರಿಸಿದ ಚರ್ಮವಾದ್ಯ ಬಿಡುವಿಲ್ಲದೇ ಬಡಿಯುತ್ತಾ ಬೆವರು ಬಸಿಯುವ ತನಕ ಕುಣಿದು ಸಂಭ್ರಮಿಸುತ್ತಾರೆ. ಈ ರೊಟ್ಟಿ ಹಬ್ಬದಲ್ಲಿ ಬಹುಪಾಲು ಸೋಲಿಗರು ತಮ್ಮ ಕುಲದೈವ ಬಿಲ್ಲಯ್ಯ ಮತ್ತು ಕಾರಯ್ಯನನ್ನು ಪೂಜಿಸುತ್ತಾರೆ. ಕೆಲವು ಕಡೆ ಕೊಂಬಿನ ಬಸಣ್ಣ, ಜಡೇಸ್ವಾಮಿ, ಮಾದೇಶ್ವರ ಮತ್ತು ಬಿಳಿಗಿರಿ ರಂಗನಾಥನಿಗೂ ಪೂಜೆ ಸಲ್ಲುತ್ತದೆ. ಬಿಲ್ಲಯ್ಯ ಮತ್ತು ಕಾರಯ್ಯ ಎನ್ನುವುದು ಮಾದಪ್ಪನ ಹೆಸರುಗಳು ಎನ್ನುವ ನಂಬಿಕೆ ಇದೆ. ರೊಟ್ಟಿ ಹಬ್ಬದ ಸಂಜೆ ಈ ಕುಲದ ಒಬ್ಬರಿಗೆ ದೇವರು ಮೈಮೇಲೆ ಬರುತ್ತದೆ. ತಮ್ಮ ಕಷ್ಟ ಕಾರ್ಪಣ್ಯ, ಭವಿಷ್ಯ, ಶಕುನಗಳನ್ನು ಈ ವೇಳೆ ವಿಚಾರಿಸಲಾಗುತ್ತದೆ. ಒಂದೂರಿಂದ ಒಂದೂರಿಗೆ ದೇವರ ಉತ್ಸವ ಬರುತ್ತದೆ.
ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ:
ಸೋಲಿಗರ ರೊಟ್ಟಿ ಹಬ್ಬವನ್ನು ಈ ಕುಲದ ಮುಖ್ಯಸ್ಥ ಹಿರೀಕ ನಿರ್ಧರಿಸುತ್ತಾನೆ. ಯಾವ ಪೋಡಿನಲ್ಲಿ ಯಾವ ದಿನ ರೊಟ್ಟಿಹಬ್ಬ ನಡೆಯಬೇಕು ಎನ್ನುವುದನ್ನು ಈತನೇ ನಿಶ್ಚಯಿಸುತ್ತಾನೆ. ಎಲ್ಲಾ ಪೋಡುಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ರೊಟ್ಟಿ ಹಬ್ಬ ನಡೆಯುತ್ತದೆ. ಊರಿನ ಹಿರಿಯರು ಕೂತು ರೊಟ್ಟಿಹಬ್ಬದ ದಿನವನ್ನು ನಿರ್ಧರಿಸಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಒಂದು ಪೋಡಿನ ರೊಟ್ಟಿ ಹಬ್ಬಕ್ಕೆ ಇನ್ನೊಂದು ಪೋಡಿನವರು ಬರಬಹುದು. ಅವರಿಗೆ ಆಹ್ವಾನವೂ ಹೋಗಿರುತ್ತದೆ. ಹೀಗೆ ರೊಟ್ಟಿ ಹಬ್ಬಕ್ಕೆ ಬರುವ ಹದಿಹರೆಯದ ಸೋಲಿಗ ತರುಣರಿಗೆ ಯುವತಿಯರಿಗೆ ಈ ರೊಟ್ಟಿ ಹಬ್ಬ ಬಹುಮಹತ್ವದ್ದೂ ಹೌದು.
ರೊಟ್ಟಿ ಹಬ್ಬದ ಸಂದರ್ಭದಲ್ಲಿಯೇ ಸೋಲಿಗರ ವಿವಾಹಗಳೂ ಜರುಗುತ್ತವೆ. ಸೋಲಿಗರು ಇದನ್ನು “ಕೂಡಾವಳಿ” ಎಂದು ಕರೆಯುತ್ತಾರೆ. ಒಬ್ಬಳು ಸೋಲಿಗರ ಹುಡುಗಿಗೆ ಕುಣಿಯುವವರ ಪೈಕಿಯ ಒಬ್ಬ ಹುಡುಗ ಇಷ್ಟ ಆದ ಎಂದಾದರೆ ಹುಡುಗಿ ಹುಡುಗನಿಗೆ ಕಲ್ಲಿನಲ್ಲಿ ಹೊಡೆಯುತ್ತಾಳೆ. ಮೂರು ಸಲ ಕಲ್ಲಲ್ಲಿ ಹೊಡೆದಳು ಎಂದಾದರೆ ಆ ಜೋಡಿ ಮದುವೆ ನಿಶ್ಚಯ ಎಂದರ್ಥ. ರೊಟ್ಟಿಹಬ್ಬ ಮುಗಿದ ನಂತರ ಅವರಿಬ್ಬರೂ ಒಂದು ವಾರ ಕಾಡೊಳಗೆ ಹೊರಟು ಕಳೆದು ಹೋಗುತ್ತಾರೆ. ಹಾಗೆ ನಾಪತ್ತೆಯಾಗಿ ವಾರದ ತನಕ ಅವರಿಬ್ಬರು ಕಾಡಿನೊಳಗೆ ಅಜ್ಞಾತ ಸಂಸಾರ (ಕೂಡಾವಳಿ) ನಡೆಸಬೇಕು. ಇದು ಸೋಲಿಗರು ತಲೆತಲೆಮಾರುಗಳಿಂದ ನಡೆಸಿಕೊಂಡು ಬಂದ ಕಟ್ಟಳೆ.
ಹಾಗೆ ತನ್ನ ಪ್ರೇಯಸಿಯನ್ನು ಕಾಡಿಗೆ ಕರೆದುಕೊಂಡ ಹೋದ ಹುಡುಗ ತನ್ನೊಂದಿಗೆ ಬಂದ ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಸಂಸಾರ ಜವಾಬ್ದಾರಿಯ ಡೆಮೋ ಇದು. ಇದು ಅವನ ಮತ್ತು ಅವಳ ಪಾಲಿನ ಸತ್ವ ಪರೀಕ್ಷೆ ಮಾಸ. ಒಮ್ಮೆ ಕಾಡು ಹೊಕ್ಕ ಜೋಡಿ ವಾಪಾಸ್ ಮನೆಗೆ ಪ್ರವೇಶಿಸುವಂತಿಲ್ಲ. ಕಷ್ಟವೋ ಸುಖವೋ ಕಾಡುಗೆಣಸು, ಹಣ್ಣು ಹಂಪಲು ತಿಂದು ಬದುಕಬೇಕು. ಕಾಡಿನಲ್ಲಿ ಪ್ರೇಮಿ ತನ್ನ ಪ್ರೇಯಸಿಗೆ ಬಾಲದಂಡೆ ಹಕ್ಕಿಯ ಪುಕ್ಕವನ್ನು ಅಥವಾ ಗರಿಯನ್ನು (ಇಂಡಿಯನ್ ಪ್ಯಾರಡೈಸ್ ಫ್ಲೈ ಕ್ಯಾಚರ್) ಉಡುಗೊರೆಯಾಗಿ ಹುಡುಕಿ ತಂದುಕೊಟ್ಟು ತನ್ನ ಪ್ರೇಮವನ್ನು ನಿವೇದಿಸಿಕೊಳ್ಳಬೇಕು. ಆಗ ಮಾತ್ರ ಸೋಲಿಗ ಯುವತಿ ಪ್ರೇಮವನ್ನು ಅಂಗೀಕರಿಸುತ್ತಾಳೆ.
ವಾರ ಕಳೆದ ನಂತರ ಯಾರಾದರೂ ಹೋಗಿ ಊರಿನ ಮುಖಂಡರೆದುರಿಗೆ ಅವರನ್ನು ಕರೆದುಕೊಂಡು ಬಂದು ನಿಲ್ಲಿಸುತ್ತಾರೆ. ಇಬ್ಬರೂ ಪರಸ್ಪರ ಜೋಡಿಯಾಗಲು ಒಪ್ಪಿಗೆಯೇ ಎಂದು ಇಬ್ಬರನ್ನೂ ಕೇಳುತ್ತಾರೆ. ಹುಡುಗ ಹುಡುಗಿಯನ್ನು ಸಾಕಬಲ್ಲನೇ ಇಲ್ಲವೇ ಎಂಬುದನ್ನು ನೋಡಿಕೊಂಡು ಹಿರಿಯರು ಮದುವೆಯನ್ನು ನಿಶ್ಚಯಿಸುತ್ತಾರೆ; ನಂತರ ಮದುವೆಯಾಗುತ್ತದೆ. ಸೋಲಿಗ ಸಂಪ್ರದಾಯದ ಪ್ರಕಾರ ವರನ ಕಡೆಯವರು ವಧುವಿಕೆ ಒಂದೂಕಾಲು ರೂಪಾಯಿಯನ್ನು ವಧುದಕ್ಷಿಣೆ ಎಂದು ಕೊಡಬೇಕು.
ಬಿಳಿಗಿರಿ ರಂಗನಾಥ ಸೋಲಿಗರಿಗೆ ಭಾವನಾದ ಕಥೆ:
ಮೊದಲೇ ಹೇಳಿದಂತೆ ಈ ರೊಟ್ಟಿ ಹಬ್ಬ ಅಂದಾಜು ಸಂಕ್ರಾಂತಿಯಿಂದ ಯುಗಾದಿವರೆಗೂ ನಡೆಯುತ್ತದೆ. ಸಂಕ್ರಾಂತಿಯನ್ನು ಚಿಕ್ಕ ಜಾತ್ರೆ ಎಂದೂ, ಯುಗಾದಿಯನ್ನು ದೊಡ್ಡ ಜಾತ್ರೆಯೆಂದೂ ಇವರು ಕರೆಯುತ್ತಾರೆ. ಬಿಳಿಗಿರಿ ರಂಗನಾಥಸ್ವಾಮಿಯನ್ನು ಬೇಟೆ ರಂಗನಾಥ ಸ್ವಾಮಿಯೆಂದೂ ಇವರು ಕರೆದುಕೊಳ್ಳುತ್ತಾರೆ. ಒಂದು ಪ್ರಾಚೀನ ನಂಬಿಕೆಯ ಅನ್ವಯ ಸೋಲಿಗರಿಗೆ ರಂಗನಾಥ ಸ್ವಾಮಿ ಭಾವ. ಇದಕ್ಕೊಂದು ಜನಪದ ಕಥೆಯೂ ಇದೆ. ರಂಗನಾಥಸ್ವಾಮಿ ಕಾಡಿಗೆ ಬೇಟೆಗೆ ಹೋಗುವಾಗ, ಕಾಡಿನಲ್ಲಿ ಕಂಡ ಸೋಲಿಗರ ಹುಡುಗಿಯ ಮೇಲೆ ಆಕರ್ಷಿತನಾಗಿ ಕೈಹಿಡಿದು ಎಳೆದ ಎಂಬ ಪ್ರತೀತಿ ಇದೆ.
ಈಗ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಜೀರ್ಣೋದ್ಧಾರವಾಗಿದೆ. ಈ ಹಿಂದೆ ದೇವಾಲಯದ ಒಂದು ಕಲ್ಲಿನಲ್ಲಿ ಸೋಲಿಗರ ಹೆಣ್ಣಿನ ಬಳೆಯ ಗುರುತು ಕಲ್ಲಿನಲ್ಲಿ ಮೂಡಿತ್ತು ಎಂದೂ ಹೇಳುತ್ತಾರೆ; ಅದನ್ನು ಗುರುತಿಸಿದವರೂ ಇದ್ದಾರೆ. ನಂತರ ರಂಗನಾಥ ಸ್ವಾಮಿ ಆ ಸೋಲಿಗ ಕನ್ಯೆಯನ್ನೇ ಮದುವೆಮಾಡಿಕೊಂಡು ವಾಸವಿದ್ದ ಎಂಬುದು ಒಂದು ನಂಬಿಕೆ.
ಬಿಳಿಗಿರಿ ರಂಗನ ಬೆಟ್ಟ, ಮಲೆ ಮಾದೇಶ್ವರನ ಬೆಟ್ಟದಲ್ಲಿ ಪ್ರತೀ ವರ್ಷ ನಿಶ್ಚಯಿಸಿದ ದಿನಗಳಂದೇ ಸೋಲಿಗರ ಪೋಡುಗಳಲ್ಲಿ ರೊಟ್ಟಿಹಬ್ಬ ನಡೆಯುತ್ತದೆ. ರೊಟ್ಟಿ ಹಬ್ಬದ ಸಂದರ್ಭದಲ್ಲಿಯೇ ಸೋಲಿಗರು ದೊಡ್ಡ ಸಂಪಿಗೆ ಮರವನ್ನೂ ಪೂಜಿಸುತ್ತದ್ದರಂತೆ. ಈಗ ಆ ಆಚರಣೆ ನಡೆಯುತ್ತಿರುವ ಕುರಿತು ಖಾತ್ರಿ ಇಲ್ಲ. ಅತ್ಯಂತ ವಿಶಿಷ್ಟ ಆಚರಣೆಯ ಈ ರೊಟ್ಟಿ ಹಬ್ಬ ನಾಗರೀಕ ಪ್ರಪಂಚದಿಂದ ದೂರವಾಗಿ ನಡೆಯುತ್ತಲೇ ಇದೆ. ಇಂದಿಗೂ ತಮ್ಮನ್ನು ತಾವು ಕಾಡಿನ ಮಕ್ಕಳೆಂದು ಭಾವಿಸುವ ಸೋಲಿಗರ ಪ್ರಪಂಚವೇ ಬೇರೆ. ತಮಗೆ ಗೊತ್ತಿರುವ ಮತ್ತು ಪರಿಚಿತ ಜನರನ್ನು ಮಾತ್ರ ತಮ್ಮ ಹಬ್ಬದಲ್ಲಿ ಸೇರಿಸಿಕೊಳ್ಳುತ್ತಾರೆ. ಈಗಲೂ ಹೊರಪ್ರಪಂಚದ ಬಹುಪಾಲು ಜನರಿಗೆ ರೊಟ್ಟಿ ಹಬ್ಬದಲ್ಲಿ ಭಾಗಿಯಾಗುವುದು ನಿಷಿದ್ಧ.
–ವಿಭಾ (ವಿಶ್ವಾಸ್ ಭಾರದ್ವಾಜ್)
***
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel