ಬೆಂಗಳೂರು: ರಾಜ್ಯ ರಾಜಕಾರಣದ ಮಟ್ಟಿಗೆ ಜಿದ್ದಾಜಿದ್ದಿನ ಕಣಗಳಾಗಿ ಮಾರ್ಪಟ್ಟಿರುವ ಆರ್.ಆರ್ ನಗರ ಹಾಗೂ ಶಿರಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರ ಇಂದು ಸಂಜೆ 6 ಗಂಟೆಗೆ ತೆರೆ ಬೀಳಲಿದೆ.
ನವೆಂಬರ್ 3ರಂದು ಉಪಚುನಾವಣೆ ಮತದಾನ ನಡೆಯಲಿದ್ದು, ನ.10ರಂದು ಮತ ಎಣಿಕೆ ನಡೆಯಲಿದೆ. ಇಂದು ಸಂಜೆ ಬಹಿರಂಗ ಪ್ರಚಾರ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಾಳೆ ಅಭ್ಯರ್ಥಿಗಳು ಮನೆ ಮನೆ ತೆರಳಿ ಪ್ರಚಾರ ನಡೆಸಲಿದ್ದಾರೆ.
ಇಂದು ಸಂಜೆ ಉಪಸಮರಕ್ಕೆ ಬಹಿರಂಗ ಪ್ರಚಾರ ಕೊನೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಕೊನೆ ದಿನದ ಬಿರುಸಿನ ಮತಬೇಟೆ ನಡೆಸುತ್ತಿದ್ದಾರೆ.
ಶಿರಾದಲ್ಲಿ ಜೆಡಿಎಸ್ ಬೃಹತ್ ಪ್ರಚಾರ ಸಭೆ ನಡೆಸಿದ್ದು, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ ಪರ ಮತಯಾಚನೆ ನಡೆಸುತ್ತಿದ್ದಾರೆ.
ಬಿಜೆಪಿಯಿಂದ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಬೃಹತ್ ಬೈಕ್ rally ನಡೆಸಿ ಮತಯಾಚನೆ ನಡೆಸಲಾಗಿದೆ. ಬೈಕ್ ರ್ಯಾಲಿಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ದಾರೆ.
ಆರ್.ಆರ್ ನಗರದಲ್ಲಿ ಕಾಂಗ್ರೆಸ್‍ನ ಕೊನೆ ದಿನದ ಪ್ರಚಾರದ ಅಬ್ಬರ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಬಿರುಸಿನ ಪ್ರಚಾರ ನಡೆಸಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮತ್ತೀಕೆರೆ, ಜೆ.ಪಿ ಪಾರ್ಕ್‍ನಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ನಡೆಸಿದರು. ಪಾದಯಾತ್ರೆ ವೇಳೆ ಚರ್ಚ್ ಹಾಗೂ ಪ್ರಾರ್ಥನಾ ಮಂದಿರಗಳಿಗೆ ತೆರಳಿ ಡಿಕೆಶಿ ಕೈ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಕೊನೆ ದಿನದ ಬಿರುಸಿನ ಪ್ರಚಾರ ನಡೆಸಿದರು.
ಉಪ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಶಿರಾ ಕ್ಷೇತ್ರ..
ಬಿಜೆಪಿ-ಡಾ.ರಾಜೇಶ್‍ಗೌಡ
ಕಾಂಗ್ರೆಸ್-ಟಿ.ಬಿ ಜಯಚಂದ್ರ
ಜೆಡಿಎಸ್-ಅಮ್ಮಾಜಮ್ಮ
ಆರ್.ಆರ್ ನಗರ ಕ್ಷೇತ್ರ
ಕಾಂಗ್ರೆಸ್-ಕುಸುಮಾ
ಬಿಜೆಪಿ: ಮುನಿರತ್ನ
ಜೆಡಿಎಸ್-ಕೃಷ್ಣಮೂರ್ತಿ
ಸಂಜೆ 5 ಗಂಟೆಯಿಂದ ಮದ್ಯ ಮಾರಾಟ ಬಂದ್, ನಿಷೇಧಾಜ್ಞೆ ಜಾರಿ
ನವೆಂಬರ್ 3ರಂದು ಮತದಾನ ನಡೆಯುವ ಬೆಂಗಳೂರಿನ ಆರ್.ಆರ್ ನಗರ ಹಾಗೂ ಶಿರಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಜೆ 5 ಗಂಟೆಯಿಂದ ನಿಷೇಧಾಜ್ಞೆ ಜಾರಿಗೆ ಬರಲಿದೆ. ಜತೆಗೆ ಸಂಜೆ 5 ಗಂಟೆಯಿಂದಲೇ ಚುನಾವಣೆ ನಡೆಯುವ ಕ್ಷೇತ್ರ ವ್ಯಾಪ್ತಿಯಲ್ಲಿರುವ ವೈನ್ಸ್, ಬಾರ್ ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ.
ಸಂಜೆ 6 ಗಂಟೆಯ ನಂತರ ಬಹಿರಂಗ ಪ್ರಚಾರ ಕೊನೆಗೊಂಡ ಬಳಿಕ ಕ್ಷೇತ್ರದಲ್ಲಿ ಮತದಾರರಲ್ಲದವರು ಇರುವಂತಿಲ್ಲ. ಯಾರೇ ನಾಯಕರಾಗಲಿ, ಕಾರ್ಯಕರ್ತರಾಗಲಿ ಕ್ಷೇತ್ರ ಬಿಟ್ಟು ತೆರಳಬೇಕು. ಇಲ್ಲವಾದರೆ ಪ್ರಕರಣ ದಾಖಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಹಾಗೂ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಆರ್.ಆರ್ ನಗರದಲ್ಲಿ 9 ಫ್ಲೈಯಿಂಗ್ ಸ್ಕ್ವಾಡ್‍ಗಳ ನೇಮಕ ಮಾಡಲಾಗಿದ್ದು, 8 ವಿಎಸ್‍ಟಿ ತಂಡ ರಚಿಸಲಾಗಿದೆ. 38 ಮಾರ್ಷಲ್‍ಗಳ ತಂಡ, ವಿಡಿಯೋಗ್ರಾಫರ್, 8 ಅಬಕಾರಿ ತಂಡಗಳನ್ನು ನೇಮಕ ಮಾಡಲಾಗಿದೆ. ಕ್ಷೇತ್ರದಲ್ಲಿ ಸಂಚರಿಸುವ ವಾಹನಗಳ ತಪಾಸಣೆ ನಡೆಯಲಿದ್ದು, ಕಲ್ಯಾಣ ಮಂಟಪ ಸೇರಿದಂತೆ ಜನ ಸೇರುವ ಕಡೆ ಹದ್ದಿನ ಕಣ್ಣಿಡಲಾಗುವುದು ಎಂದು ಹೇಳಿದ್ದಾರೆ.
ಒಪ್ಪಿದರೆ ಮಾತ್ರ ಕೋವಿಡ್ ರೋಗಿಗಳಿಗೆ ಮತದಾನದ ಅವಕಾಶ
ನವೆಂಬರ್ 3ರಂದು ನಡೆಯುವ ಮತದಾನದ ವೇಳೆ ಕೋವಿಡ್ ಪಾಸಿಟಿವ್ ಬಂದವರು ಒಪ್ಪಿದರೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ಮತದಾನದ ವೇಳೆ ಮುನ್ನೆಚ್ಚರಿಕೆ ವಹಿಸಲು ಪ್ರತಿಬೂತ್‍ನಲ್ಲಿ ಆರೋಗ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಆರ್.ಆರ್ ನಗರದಲ್ಲಿ 5050 ಪೋಸ್ಟಲ್ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 489 ಮತದಾರರು, 22 ವಿಕಲಚೇತನರು ಮತಹಾಕಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿದ 14 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel