ಕಳೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದ ಸೌತ್ ಆಫ್ರಿಕಾ, ಹಾಲಿ ಚಾಂಪಿಯನ್ಗಳ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಮೂಲಕ ಏಕದಿನ ವಿಶ್ವಕಪ್ನಲ್ಲಿ ಇಂಗ್ಲೆಂಡ್ನ ವಿರುದ್ಧ 229 ರನ್ಗಳ ಭಾರೀ ಅಂತರದ ಗೆಲುವು ಸಾಧಿಸಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸೌತ್ ಆಫ್ರಿಕಾ, ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಆಕ್ರಮಣಕಾರಿ ಪ್ರದರ್ಶನ ನೀಡಿತು. ಹೆನ್ರಿಚ್ ಕ್ಲಾಸೆನ್(109) ಅವರ ಸ್ಪೋಟಕ ಶತಕದ ನೆರವಿನಿಂದ 50 ಓವರ್ಗಳಲ್ಲಿ 7 ವಿಕೆಟ್ಗೆ 399 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಟಾರ್ಗೆಟ್ ಚೇಸ್ ಮಾಡಿದ ಇಂಗ್ಲೆಂಡ್ 22 ಓವರ್ಗಳಲ್ಲಿ 170 ರನ್ಗೆ ಆಲೌಟ್ ಆಗಿ 229 ರನ್ಗಳ ಭಾರೀ ಅಂತರದ ಸೋಲು ಕಂಡಿತು.
ಆಫ್ರಿಕನ್ನರ ಬ್ಯಾಟಿಂಗ್ ಅಬ್ಬರ:
ಮೊದಲು ಬ್ಯಾಟಿಂಗ್ ಆರಂಭಿಸಿದ ಸೌತ್ ಆಫ್ರಿಕಾ ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ ಕ್ವಿಂಟನ್ ಡಿಕಾಕ್(4) ವಿಕೆಟ್ ಕಳೆದುಕೊಂಡಿತು. ಆದರೆ ನಂತರದಲ್ಲಿ ಜೊತೆಯಾದ ರಿಜಾ಼ ಹೆಂಡ್ರಿಕ್ಸ್(85) ಹಾಗೂ ದುಸೇನ್(60) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 2ನೇ ವಿಕೆಟ್ಗೆ 121 ರನ್ಗಳ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ನಂತರ ಕಣಕ್ಕಿಳಿದ ಐಡೆನ್ ಮಾರ್ಕ್ರಂ(42) ಸಹ ಉಪಯುಕ್ತ ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಡೇವಿಡ್ ಮಿಲ್ಲರ್(5) ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕುವ ಮೂಲಕ ನಿರಾಸೆ ಮೂಡಿಸಿದರು.
ಕ್ಲಾಸೆನ್ ಕ್ಲಾಸಿಕ್ ಸೆಂಚುರಿ:
5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿಚ್ ಕ್ಲಾಸೆನ್(109 ರನ್, 67 ಬಾಲ್, 12 ಬೌಂಡರಿ, 4 ಸಿಕ್ಸ್) ಸ್ಪೋಟಕ ಆಟವಾಡಿದರು. ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಕ್ಲಾಸೆನ್, ಪ್ರಸಕ್ತ ವಿಶ್ವಕಪ್ನಲ್ಲಿ ಮತ್ತೊಂದು ಸ್ಪೋಟಕ ಶತಕ ದಾಖಲಿಸಿ ಅಬ್ಬರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಮಾರ್ಕೋ ಜಾನ್ಸನ್(75* ರನ್, 42 ಬಾಲ್, 3 ಬೌಂಡರಿ, 6 ಸಿಕ್ಸ್) ಬಿರುಸಿನ ಅರ್ಧಶತಕ ಸಿಡಿಸಿ ಮಿಂಚಿದರು. ಇದರ ಪರಿಣಾಮ ಸೌತ್ ಆಫ್ರಿಕಾ 50 ಓವರ್ಗಳಲ್ಲಿ 399/7 ರನ್ಗಳ ಬೃಹತ್ ಮೊತ್ತ ಪೇರಿಸಿತು. ಇಂಗ್ಲೆಂಡ್ ಪರ ಟಾಪ್ಲೆ 3 ವಿಕೆಟ್ ಪಡೆದರೆ, ಅಟ್ಕಿನ್ಸನ್ ಹಾಗೂ ರಶೀದ್ ತಲಾ 2 ವಿಕೆಟ್ ಪಡೆದುಕೊಂಡರು.
ಆಂಗ್ಲರ ಬ್ಯಾಟಿಂಗ್ ವೈಫಲ್ಯ:
ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಸೋಲಿನ ಆಘಾತ ಕಂಡಿದ್ದ ಇಂಗ್ಲೆಂಡ್ ಕಮ್ಬ್ಯಾಕ್ ನಿರೀಕ್ಷೆಯಲ್ಲಿತ್ತು. ಆದರೆ ಸೌತ್ ಆಫ್ರಿಕಾ ತಂಡದ ಸಂಘಟಿತ ಪ್ರದರ್ಶನಕ್ಕೆ ತತ್ತರಿಸಿದ ಹಾಲಿ ಚಾಂಪಿಯನ್ಸ್ ಬೌಲಿಂಗ್ ಜತೆಗೆ ಬ್ಯಾಟಿಂಗ್ನಲ್ಲೂ ವೈಫಲ್ಯಕ್ಕೆ ಸಿಲುಕಿತು. ಆಫ್ರಿಕನ್ನರ ಪರಿಣಾಮಕಾರಿ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್, 22 ಓವರ್ಗಳಲ್ಲಿ ಕೇವಲ 170 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ತಂಡದ ಪರ 9 ಹಾಗೂ 10ನೇ ಕ್ರಮಾಂಕದಲ್ಲಿ ಬಂದ ಮಾರ್ಕ್ ವುಡ್(43*) ಹಾಗೂ ಅಟ್ಕಿನ್ಸನ್(35) ಸ್ವಲ್ಪಮಟ್ಟಿನ ಪ್ರತಿರೋಧ ತೋರಿಸಿದ್ದನ್ನ ಬಿಟ್ಟರೆ, ಪ್ರಮುಖ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಸೌತ್ ಆಫ್ರಿಕಾ ಪರ ಕಾಟ್ಜೆ 3 ವಿಕೆಟ್ ಪಡೆದರೆ, ಎನ್ಗಿಡಿ ಹಾಗೂ ಜಾನ್ಸನ್ ತಲಾ 1 ವಿಕೆಟ್ ಪಡೆದರು. ಇವರಿಗೆ ಸಾಥ್ ನೀಡಿದ ರಬಾಡ ಮತ್ತು ಮಹಾರಾಜ್ ತಲಾ 1 ವಿಕೆಟ್ ಪಡೆದುಕೊಂಡರು.
RSA v ENG, South Africa, England, Heinrich Klaasen, World Cup