ಅಮೇರಿಕನ್ ಯಾತ್ರೆ; ಹಿಮತ್ಪಾಧಿತ ರಾಜ್ಯ ಕನೆಟಿಕಟ್ ಎಂಬ ವಿಸ್ಮಯ ನಾಡು – ಇಲ್ಲಿನ ಚಳಿ ಮಾತ್ರ ಭಯಂಕರ: Saakshatv yatrika episode 14
ಕೆಲ ತಿಂಗಳುಗಳ ಹಿಂದೆ ನನ್ನಮ್ಮ, ನನ್ನ ಮಗನ ಹತ್ತಿರ ನಿನ್ನ ರಾಜ್ಯ ಯಾವುದೆಂದು ಕೇಳಿದಾಗ ಕನೆಟಿಕಟ್ ಅಂದಿದ್ದನಂತೆ!! ಅವನಿಗೆ ಮಾತ್ರವಲ್ಲ ನನಗೂ ಕನೆಟಿಕಟ್ ಅನ್ನೋದು ಕರ್ನಾಟಕ ಅಂದಂತೆ ಕೇಳ್ತಿತ್ತು. ನಾನು ಕನೆಟಿಕಟ್ಟಿಗೆ ಮೊದಲು ಬಂದಿದ್ದು ಹತ್ತು ದಿನಗಳ ಮಟ್ಟಿಗೆ. ಡಾಲಸ್ಸಿಗೆ ವಾಪಸ್ ಹೋಗಿ ಕೆಲ ಸಮಯದ ನಂತರ ಪುನಃ ಬರುವುದಾಗಿ ನಿರ್ಧರಿತವಾಗಿತ್ತು. ಅಮೆರಿಕಾಗೆ ಬಂದು ಎರಡು ವರ್ಷಗಳಾಗಿದ್ದರೂ ನಿಜವಾದ ಚಳಿಗಾಲವನ್ನು ಕಂಡಿರಲಿಲ್ಲ. ಹೆಚ್ಚೆಂದರೆ -4-5 ಡಿಗ್ರಿಗಳಷ್ಟು ಚಳಿಯನ್ನ ನೋಡಿದ್ದೆ. ಆದರೆ ನಿಜವಾದ ಚಳಿಯ ಅನುಭವವಾಗಿದ್ದು ಅಲ್ಲಿ. ಹೊರಡಬೇಕಾದರೆ ನಮ್ಮ ಬಾಸ್ ಹೇಳಿದ್ದರು, ಸಿಕ್ಕಾಪಟ್ಟೆ ಚಳಿ ಇರತ್ತೆ ಬೆಚ್ಚಗಿನ ಬಟ್ಟೆ ತೆಗೆದುಕೊಂಡು ಬಾ ಎಂದು. ನನ್ನ ಹತ್ತಿರವಿರುವ ಜಾಕೆಟ್ ಬಗ್ಗೆ ವಿಶ್ವಾಸವಿತ್ತು, ಆದರೆ ನನ್ನ ಹತ್ತಿರ ಥರ್ಮಲ್ ಬಟ್ಟೆಗಳು ಇರಲಿಲ್ಲ. ಡಾಲಸ್ಸಿನಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ. ಸರಿ ಅಲ್ಲೇ ನೋಡಿದರಾಯಿತೆಂದು ಹುಂಬ ಧೈರ್ಯ ಮಾಡಿ ಹೊರಟಿದ್ದೆ.
ಕನೆಟಿಕಟ್ ರಾಜ್ಯದ ರಾಜಧಾನಿಯಾದ ಹಾರ್ಟ್‌ಫರ್ಡಿನಲ್ಲಿ ಇಳಿದಾಗ ಸಂಜೆ 4 ಗಂಟೆ. ಜನವರಿಯ ಸಮಯ, ಆಗಲೇ ನಿಧಾನವಾಗಿ ಕತ್ತಲಾಗತೊಡಗಿತ್ತು. ವಿಮಾನ ನಿಲ್ದಾಣದಿಂದ ಹೊರ ಬಂದಾಗ ಹೊರಗಡೆಯ ಉಷ್ಣಾಂಶ -10 ರಿಂದ -12 ಡಿಗ್ರಿಯಿತ್ತು. ಜಾಕೆಟ್ ಚಳಿಯನ್ನು ತಡೆಯುತ್ತಿದ್ದರೂ ಪ್ಯಾಂಟು ಮತ್ತೆ ಗ್ಲೌಸುಗಳು ಯಾವ ಪ್ರಯೋಜನಕ್ಕೂ ಬಾರದವೆಂದು ನಿಮಿಷದೊಳಗೆ ಸಾಬೀತುಪಡಿಸಿದವು. ಬುಕ್ ಮಾಡಿದ್ದ ಉಬರ್ ಬರಲು 7-8 ನಿಮಿಷವಿತ್ತು. ಅಂಗೈ ಮತ್ತು ಕಾಲುಗಳಿಗೆ ನಿಧಾನಕ್ಕೆ ಚೂರಿಯಲ್ಲಿ ಕೊರೆದ ಅನುಭವವಾಗ್ತಾ ಇತ್ತು. ಮುಖ ನಿಧಾನಕ್ಕೆ ಉರಿಯಲು ಶುರುವಾಗಿತ್ತು. ಹೊರ ಬಂದ ಹತ್ತು ನಿಮಿಷದೊಳಗೆ ನರಕ ದರ್ಶನ. ಕಾರೊಳಗಡೆ ಕೂತಾಗ ಹೋದ ಜೀವ ಬಂದಂತಾಗಿತ್ತು.
ಒಂದೆರಡು ದಿನ ಮುಂಚೆ ಹಿಮ ಉದುರಿದ ಕಾರಣಕ್ಕೆ ರಸ್ತೆಯ ಪಕ್ಕದಲ್ಲಿ, ಬಯಲಿನಲ್ಲಿ ಎಲ್ಲೆಡೆ ಹಿಮ ರಾಶಿ ಹಾಕಿಕೊಂಡಿತ್ತು. ನನ್ನ ಹಳೆ ಕಂಪನಿ ಬಾಸ್ ಜೊತೆ ಮನೆ ಹುಡುಕಲು ಹೋದಾಗ, ಇದೇ ನಗರದಲ್ಲಿರುವ ನಮ್ಮೂರ ಅಕ್ಕನ ಮನೆಗೆ ಹೋದಾಗ ಎಲ್ಲೆಡೆ ಕಂಡಿದ್ದು ಹಿಮವೇ. ನೋಡಲೇನೋ ಚನ್ನಾಗಿ ಕಾಣ್ತಿತ್ತು. ಆದರೆ ನಡೆಯಲು ಮಾತ್ರ ಪ್ರಾಣ ಸಂಕಟ. ಥರ್ಮಲ್ ಕೊಂಡರೂ ಯಾಕೋ ಅದನ್ನ ಹಾಕಿ ನಡೆಯೋದು ಕಿರಿಕಿರಿಯಾಗ್ತಿತ್ತು.
ಈ ನಡುವೆ ಒಂದಿನ ರಾತ್ರಿ ಹಿಮ ಉದುರಿತ್ತು. ಮೊದಲ ಅನುಭವವಾದ ಕಾರಣ ಹೊರಹೋಗಿ ಹಿಮದಲ್ಲಿ ನಿಂತು ಆನಂದಪಟ್ಟಿದ್ದೆ. ಬಿಸಿ ಕಾಫಿ ಮಾಡಿಕೊಂಡು ತಡರಾತ್ರಿವರೆಗೂ ಹಿಮ ಬೀಳುವುದನ್ನ ಹೋಟೆಲಿನ ಕಿಟಕಿಯಿಂದ ನೋಡುತ್ತಾ ನಿಂತಿದ್ದೆ. ಏನೇ ಅನ್ನಿ ಹಿಮ ಬೀಳುವುದು ನೋಡಲು ನಿಜಕ್ಕೂ ಸುಂದರ. ಆದರೆ ಮರುದಿನ ಮಾತ್ರ ಕೆಟ್ಟ ರಗಳೆ. ಅರ್ಧ ಕರಗಿದ ಹಿಮ ಮಣ್ಣಿನೊಟ್ಟಿಗೆ ಮಿಶ್ರಗೊಂಡು ಎಲ್ಲೆಡೆ ಕೆಸರಾಗುತ್ತದೆ. ಪಾದಚಾರಿಗಳಂತೂ ಬಹಳ ಕಷ್ಟಪಡಬೇಕು.
ಇದೆಲ್ಲಾ ನೋಡಿ ಹೇಗಪ್ಪಾ ಈ ನಾಡಲ್ಲಿ ಜೀವನ ಮಾಡುವುದು ಅನ್ನಿಸಿತ್ತು. ಮುಂದೆ ಇಲ್ಲಿ ನೆಲೆ ನಿಲ್ಲುವುದನ್ನು ಯೋಚಿಸಿಯೇ ತಲೆಬಿಸಿಯಾಗತೊಡಗಿತು. ಆದರೆ ಮುಂದೆ ಇದೇ ರಾಜ್ಯ ನನಗೆ ಅತೀ ಇಷ್ಟವಾಗಿದ್ದು. ಯಾಕೋ ಏನೋ ಅಮೆರಿಕಾದ ರಾಜ್ಯಗಳಲ್ಲಿ ನಿನ್ನ ಇಷ್ಟದ ರಾಜ್ಯ ಯಾವುದಂತ ಕೇಳಿದರೆ ನಾನು ನಿಸ್ಸಂಶಯವಾಗಿ ಕನೆಟಿಕಟ್ ಅನ್ನುತ್ತೇನೆ. ಅದ್ಯಾಕೆ ಈ ರಾಜ್ಯ ನನ್ನನ್ನ ಅಷ್ಟು ಮೋಡಿ ಮಾಡಿತೆಂದು ಗೊತ್ತಿಲ್ಲ.
ನನಗೆ ಮಾತು ಸ್ವಲ್ಪ ಜಾಸ್ತಿಯಾದ ಕಾರಣ ಸಿಕ್ಕಸಿಕ್ಕವರ ಮಾತಿಗೆಳೆಯೋ ಅಭ್ಯಾಸ ಜಾಸ್ತಿ. ಇಲ್ಲಿ ನಿಧಾನಕ್ಕೆ ಜನರ ಜೊತೆ ಬೆರೆಯತೊಡಗಿದಾಗ ನಾನು ಸ್ಪೆಲ್ಲಿಂಗಿನಲ್ಲಿ ಇರುವಂತೆ ಕನೆಕ್ಟಿಕಟ್ ಎಂದು ಉಚ್ಚರಿಸಿದಾಗ ಅರ್ಥವಾಗದ ಹಾಗೆ ಮುಖ ಮಾಡ್ತಿದ್ರು. ಆಮೇಲೆ ಗೊತ್ತಾಯಿತು, ಅಲ್ಲಿ ಒಂದು ‘C’ ಸೈಲೆಂಟು, ಕನೆಟಿಕಟ್ ಅನ್ಬೇಕಂತ. ಅಕ್ಷರಶಃ ಹೇಳುವುದಾದರೆ ಕನೆಟಿಕಟ್ ಅಂದರೆ ಉಬ್ಬರ ಇಳಿತ ಇರುವ ಉದ್ದವಾದ ನದಿ ಎಂದರ್ಥ ಇಲ್ಲಿನ ಮೂಲನಿವಾಸಿಗಳ ಭಾಷೆಯಲ್ಲಿ. ಕನೆಟಿಕಟ್ ನದಿಯಿಂದ ಈ ರಾಜ್ಯ ತನ್ನ ಹೆಸರನ್ನ ಪಡೆದಿದೆ. ಅಲ್ಲದೇ ಅಮೆರಿಕಾದ ಕೆಲ ರಾಜ್ಯಗಳ ಹೆಸರುಗಳು ನದಿಯಿಂದ ಬಂದಿವೆ, ಉದಾಹರಣೆಗೆ ಮಿಸೌರಿ, ಮಿಸಿಸ್ಸಿಪ್ಪಿ , ಅರ್ಕನ್ಸಾ, ಕೊಲಾರಡೋ ಇತ್ಯಾದಿ.
ಟೆಕ್ಸಸ್ ಅನ್ನೋ ದೈತ್ಯನಿಂದ ಬರೀ 14000 ಚದರ ಕಿಲೋಮೀಟರಿನ ಈ ಪುಟ್ಟ ರಾಜ್ಯಕ್ಕೆ ಬಂದಾಗ ಎಲ್ಲಾ ಚಿಕ್ಕದೆನ್ನಿಸ್ತಾ ಇತ್ತು. ಅಲ್ಲಿ ಬರೀ ಡಾಲಸ್ ಮೆಟ್ರೋ ಪ್ರದೇಶದಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಲು ಸುಮಾರು ೫೦ ಮೈಲಿ ಬೇಕು. ಇಲ್ಲಿ ನಾವು ರಾಜ್ಯವನ್ನೇ ದಾಟಿರುತ್ತೇವೆ. ರಾಜ್ಯ ಚಿಕ್ಕದಾದರೂ ನಾನಿಲ್ಲಿ ವಾಸವಾದ ಕಾರಣ ಹೇಳಲು ಬಹಳ ಇದೆ. ಕಳೆದಬಾರಿ ಇಲ್ಲಿನ ಕನ್ನಡ ಕೂಟದ ಬಗ್ಗೆ ಹೇಳಿದ್ದೆ. ಮುಂದಿನ ಭಾಗದಲ್ಲಿ ಇಲ್ಲಿನ + ಅಮೆರಿಕಾದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಹೇಳತ್ತೇನೆ.
-ಗಿರಿಧರ್ ಭಟ್ ಗುಂಜಗೋಡು
ಹವ್ಯಾಸಿ ಬರಹಗಾರ
ಸಿದ್ಧಾಪುರ
ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel