ಬೆಂಗಳೂರು: ಭಾರತದಲ್ಲಿಯೇ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕಿಂಗ್ ಕೊಹ್ಲಿ ಹುಟ್ಟು ಹಬ್ಬದ ದಿನದಂದೇ ದೊಡ್ಡ ಸಾಧನೆಯೊಂದನ್ನು ಮಾಡಿದ್ದಾರೆ. ಈ ಸಾಧನೆಯ ಒಂದು ಝಲಕ್ ಈಗ ನಿಮ್ಮ ಮುಂದೆ ಇದೆ ನೋಡಿ….
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಮಾಡಿದ್ದ 49 ಶತಕದ ದಾಖಲೆ ಸರಿಗಟ್ಟಿದ್ದಾರೆ. ಈ ಮೂಲಕ ಕ್ರಿಕೆಟ್ ಲೋಕದಲ್ಲಿ ದೇವರ ದಾಖಲೆಯನ್ನು ಕಿಂಗ್ ಮುರಿಯುವುದು ಪಕ್ಕಾ ಎನ್ನಲಾಗುತ್ತಿದೆ. ಸದ್ಯದ ದಿನಗಳಲ್ಲಿಯೇ ಈ ಸಾಧನೆ ಮಾಡುವಂತೆ ಕ್ರಿಕೆಟ್ ದೇವರು ಕೂಡ ಹಾರೈಸಿ, ಶುಭಾಶಯ ತಿಳಿಸಿದ್ದಾರೆ.
ದೇಶದಲ್ಲಿ ನಡೆದ ಪಂದ್ಯಗಳಲ್ಲಿ ಸಚಿನ್ 20 ಶತಕ ದಾಖಲಿಸಿದ್ದರೆ, ಕಿಂಗ್ 23 ಶತಕ ದಾಖಲಿಸಿರುವ ಸಾಧನೆ ಮಾಡಿದ್ದಾರೆ. ಇನ್ನೂ ವಿದೇಶಿ ನೆಲದಲ್ಲಿ ಸಚಿನ್ 12 ಶತಕ ಬಾರಿಸಿದರೆ, ಕೊಹ್ಲಿ 21 ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಅಲ್ಲದೇ, ತಟಸ್ಥ ಸ್ಥಳಗಳಲ್ಲಿ ಸಚಿನ್ 17 ಶತಕ ಗಳಿಸಿದರೆ, ಕೊಹ್ಲಿ 5 ಶತಕದ ಸಾಧನೆ ಮಾಡಿದ್ದಾರೆ.
ಸಚಿನ್ ದಾಖಲೆಯನ್ನು ಒಟ್ಟು 12 ರಾಷ್ಟ್ರಗಳಲ್ಲಿ ಮಾಡಿದ್ದರೆ, ಕೊಹ್ಲಿ 9 ರಾಷ್ಟ್ರಗಳಲ್ಲಿ ಈ ಸಾಧನೆ ಬರೆದಿದ್ದಾರೆ. ಸಚಿನ್ 6 ತಂಡದ ವಿರುದ್ಧ 5 ಅಥವಾ ಅದಕ್ಕೂ ಹೆಚ್ಚು ಶತಕದ ದಾಖಲೆ ಹೊಂದಿದ್ದು, ಆಸ್ಟ್ರೇಲಿಯಾ ವಿರುದ್ಧ 9 ಶತಕ ದಾಖಲಿಸಿದ ಸಾಧನೆ ಮಾಡಿದ್ದಾರೆ. ಇನ್ನೂ ಕೊಹ್ಲಿ ಶ್ರೀಲಂಕಾ ವಿರುದ್ಧ 10 ಶತಕ ದಾಖಲಿಸಿದ ಗರಿಷ್ಠ ಸಾಧನೆ ಮಾಡಿದರೆ, 6 ದೇಶಗಳ ವಿರುದ್ಧ 5 ಅಥವಾ ಅದಕ್ಕಿಂತ ಹೆಚ್ಚು ಶತಕ ಗಳಿಸಿರುವ ಸಾಧನೆ ಮೆರೆದಿದ್ದಾರೆ.