ಬೆಂಗಳೂರು : ವಿಧಾನಸೌಧದಲ್ಲಿ ಇಂದು ಅವಧಿ ಪೂರ್ಣಗೊಳಿಸಿದ 15 ಮಂದಿ ವಿಧಾನ ಪರಿಷತ್ ಸದಸ್ಯರಿಗೆ ಬೀಳ್ಕೊಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶರವಣ, ಜಯಮಾಲ, ಜಯಮ್ಮ, ರೇವಣ್ಣ, ಶರಣಪ್ಪ ಮಟ್ಟೂರು, ಬೋಸರಾಜು ಸೇರಿ ಹಲವು ನಿವೃತ್ತಿ ಹೊಂದಿದ ಪರಿಷತ್ ಸದಸ್ಯರಿಗೆ ನೆನಪಿನ ಕಾಣಿಕೆ ಕೊಟ್ಟು ಬೀಳ್ಕೊಡಲಾಯಿತು.
ಈ ವೇಳೆ ಶರವಣ ಮಾತನಾಡಿ, ನಾನು ಮತ್ತೆ ಪುನರಾಯ್ಕೆ ಆಗುತ್ತೇನೆಂಬ ನಿರೀಕ್ಷೆ ಇತ್ತು. ಆದರೆ ನಿರಾಸೆ ಆಗಿದೆ. ಕೇವಲ ಮುನ್ನೂರು ಜನ ಮಾತ್ರ ಶಾಸಕರು ಎಂದು ಕರೆಸಿಕೊಳ್ಳುತ್ತಾರೆ. ಅವರಲ್ಲಿ ನಾನೂ ಒಬ್ಬನಾಗಿದ್ದೆ ಅನ್ನೋದೇ ಸಂತೋಷದ ವಿಚಾರ. ಕೋಟಾ ಶ್ರೀನಿವಾಸ ಪೂಜಾರಿ ಅವರು ಬಹಳ ಸಜ್ಜನರು. ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಲಿ ಎಂದು ಹಾರೈಸುತ್ತೇನೆ. ಈ ಸಂಧರ್ಭದಲ್ಲಿ ನನಗೆ ಸಹಕಾರ ಕೊಟ್ಟ ಎಲ್ಲರಿಗೂ ಪಕ್ಷಾತೀತವಾಗಿ ಧನ್ಯವಾದಗಳು ಎಂದು ತಿಳಿಸಿದರು.
ಬಳಿಕ ಮಾತನಾಡಿದ ತಿಪ್ಪಣ್ಣ ಕಮಕನೂರು, ಹಿಂದುಳಿದ ಸಮುದಾಯದಿಂದ ಬಂದ ನನಗೆ ಉತ್ತಮ ಅವಕಾಶ ದೊರಕಿಸಿ ಕೊಟ್ಟಿದ್ರಿ. ನನಗೆ ತಂದೆ ಇಲ್ಲ. ಸಭಾಪತಿಗಳನ್ನು ತಂದೆ ಸ್ಥಾನದಲ್ಲಿ ನೋಡಿದ್ದೇನೆ. ಕೋಟಾ ಶ್ರೀನಿವಾಸ್ ಪೂಜಾರಿಯನ್ನು ಸೋದರನ ಸ್ಥಾನದಲ್ಲಿ ನೋಡಿದ್ದೇನೆ ಎಂದು ಹೇಳುತ್ತಾ ಭಾವುಕರಾದರು
ಇನ್ನು ಈ ಕಾರ್ಯಕ್ರಮದಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ವಿಪಕ್ಷ ನಾಯಕ ಎಸ್.ಆರ್ ಪಾಟೀಲ್, ವಿಪಕ್ಷ ಸಚೇತಕ ನಾರಾಯಣಸ್ವಾಮಿ ಸೇರಿ ಹಲವರು ಭಾಗಿಯಾಗಿದ್ದಾರೆ.








