ಸುಶಾಂತ್ ಕುಟುಂಬ ಮತ್ತು ಅಭಿಮಾನಿಗಳಿಗೆ ಬೆಂಬಲ ನೀಡುವಂತೆ ಸಲ್ಮಾನ್ ಖಾನ್ ಮನವಿ
ಮುಂಬೈ, ಜೂನ್ 21: ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರ ಆತ್ಮಹತ್ಯೆಗೆ ಪ್ರಚೋದನೆಯ ಆರೋಪದ ಮೇಲೆ ತಮ್ಮ ವಿರುದ್ಧ ದೂರು ದಾಖಲಾದ ನಂತರ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ಅಭಿಮಾನಿಗಳಿಗೆ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ರಜಪೂತ್ (34) ಅವರು ಅವರ ಮುಂಬೈ ನಿವಾಸದಲ್ಲಿ ಜೂನ್ 14 ರಂದು ಶವವಾಗಿ ಪತ್ತೆಯಾಗಿದ್ದರು.
ಈ ವಾರದ ಆರಂಭದಲ್ಲಿ, ಮುಜಾಫರ್ಪುರ ಮೂಲದ ವಕೀಲ ಸುಧೀರ್ ಕುಮಾರ್ ಓಜಾ ಅವರು ಬಾಲಿವುಡ್ ದೊಡ್ಡ ಉದ್ಯಮಿಗಳಾದ ಖಾನ್, ನಿರ್ಮಾಪಕರಾದ ಆದಿತ್ಯ ಚೋಪ್ರಾ, ಕರಣ್ ಜೋಹರ್, ಏಕ್ತಾ ಕಪೂರ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರನ್ನು ಆರೋಪಿಗಳೆಂದು ಹೆಸರಿಸಿ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ನಟ ಸಲ್ಮಾನ್ ಖಾನ್ ಟ್ವೀಟ್ವೊಂದನ್ನು ಮಾಡಿದ್ದು, ತಮ್ಮ ಅಭಿಮಾನಿಗಳ ಬಳಿ ಸುಶಾಂತ್ ಸಾವಿಗೆ ನ್ಯಾಯ ಒದಗಿಸಲು ನೀವೆಲ್ಲಾ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬ ಮತ್ತು ಅಭಿಮಾನಿಗಳ ಜೊತೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ. ಅವರು ಬಳಸಿದ ಭಾಷೆ ಅಥವಾ ಶಾಪದ ಬಗ್ಗೆ ಯೋಚಿಸದೆ ನೋವನ್ನು ಅನುಭವಿಸುತ್ತಿರುವ ಅವರ ಭಾವನೆಗಳಿಗೆ ಬೆಲೆ ಕೊಡಿ ಮತ್ತು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಬೆಂಬಲ ನೀಡಿ ಎಂದು ಹೇಳಿದ್ದಾರೆ.