ಸರ್ಕಾರದಿಂದ SC/ST ಇಲಾಖೆಯ ಹೊಸ ಸಹಾಯವಾಣಿ “ಕಲ್ಯಾಣ ಮಿತ್ರ” ಲೋಕಾರ್ಪಣೆ
ಇಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ “ಕಲ್ಯಾಣ ಮಿತ್ರ ಏಕೀಕೃತ ಎಸ್. ಸಿ. ಎಸ್. ಟಿ. 24×7 ಸಹಾಯವಾಣಿ (9482300400) ಯನ್ನು ಲೋಕಾರ್ಪಣೆ ಮಾಡಲಾಯಿತು.
ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಹಾಗೂ ಕುಂದುಕೊರತೆಗಳ ಪರಿಹಾರಕ್ಕಾಗಿ ಇಲಾಖೆಯ “ಕಲ್ಯಾಣ ಮಿತ್ರ” ಏಕೀಕೃತ ಎಸ್.ಸಿ/ಎಸ್.ಟಿ 24×7 ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.
ಸಹಾಯವಾಣಿ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ, ಇತ್ತೀಚಿನ ದಿನಗಳಲ್ಲಿ ಆಡಳಿತದ ವ್ಯಾಖ್ಯಾನ, ಪ್ರಜಾಪ್ರಭುತ್ವದ ಆಕಾಂಕ್ಷೆ ಬದಲಾವಣೆ ಆಗಿದೆ. ಸರ್ಕಾರದಿಂದ ಬದಲಾವಣೆ ಆಗುವ ಈ ಪರ್ವ ಕಾಲದಲ್ಲಿ ನಾವೂ ಬದಲಾಬೇಕು. ಆಗ ನಾವೂ ಪ್ರಸ್ತುತವಾಗಿ ಉಳಿಯುತ್ತೇವೆ. ಅನುದಾನದ ಸದುಪಯೋಗವಾಗಬೇಕು. ಬದ್ಧತೆ ಇರಬೇಕು. ಆಗ ಸಮಾಜ ಉದ್ಧಾರ ಆಗುತ್ತದೆ. ನಿಮ್ಮ ಕರ್ತವ್ಯ, ಸರ್ಕಾರದ ಧ್ಯೇಯೋದ್ದೇಶ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೊರೆಸುವ ಕೆಲಸ ಮಾಡಬೇಕು. ಟೀಕೆ ಬರುತ್ತದೆ. ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಎನ್ ರವಿಕುಮಾರ್, ವೈ. ಎ. ನಾರಾಯಣಸ್ವಾಮಿ, ಅ.ದೇವೇಗೌಡ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್ ನಾಗೇಶ, ರಾಮಣ್ಣ ಲಮಾಣಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.