ಚಿಕ್ಕಬಳ್ಳಾಪುರ: ಶಾಲಾ-ಕಾಲೇಜುಗಳ ಆರಂಭಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಲಹಾ ಸಮಿತಿ ನೀಡಿರುವ ವರದಿಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ನಗರದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಈ ಹಿಂದಿನಂತೆ ಶಿಕ್ಷಣ ಇಲಾಖೆ ಮತ್ತು ತಮ್ಮ ಇಲಾಖೆಗಳ ಜತೆ ಮುಖ್ಯಮಂತ್ರಿಯವರು ಸಭೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಇನ್ನೂ ಯಾವುದೇ ತೀರ್ಮಾನ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ರಚಿಸಿರುವ ತಾಂತ್ರಿಕ ಸಲಹಾ ಸಮಿತಿ ಗುರುವಾರ ಶಿಕ್ಷಣ ಸಚಿವರನ್ನು ಭೇಟಿ ಮಾಡಿದ್ದಾರೆ ಎಂದು ಮಾಹಿತಿ ಗೊತ್ತಾಗಿದೆ. ಅವರು ನೀಡುವ ವರದಿ ಇನ್ನೂ ತಮಗೆ ಬಂದಿಲ್ಲ. ವರದಿ ಬಂದ ಬಳಿಕ ಪರಿಶೀಲಿಸಲಾಗುವುದು. ತಾಂತ್ರಿಕ ಸಮಿತಿ ಕೊಟ್ಟ ವರದಿಯೇ ಅಂತಿಮ ಎಂದೇನೂ ಅಲ್ಲ. ಸರ್ಕಾರಕ್ಕೆ ಸಮಿತಿ ಸಲಹೆ ನೀಡಿದೆ ಅಷ್ಟೇ, ಸಾಧಕ, ಬಾಧಕಗಳನ್ನು ಸರ್ಕಾರ ಪರಿಶೀಲಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ವೈದ್ಯರು ಯಾರಿಗೂ ಹೆದರುವ ಅಗತ್ಯವಿಲ್ಲ
ಹೊಸಕೋಟೆ ತಾಲ್ಲೂಕು ವೈದ್ಯಾಧಿಕಾರಿ ಅವರು ಹಾಸನದಲ್ಲಿ ಪತ್ತೆಯಾಗಿದ್ದಾರೆ. ನಕಲಿ ವೈದ್ಯರನ್ನು ಪತ್ತೆ ಹಚ್ಚಿದ ಸಂಬಂಧ ಕೆಲವರು ಅವರನ್ನು ನಿಂದಿಸಿದ್ದರಿಂದ ಮನನೊಂದು ಅವರು ಎರಡು ದಿನ ಮೊಬೈಲ್ ಸ್ವಿಚ್ಛ್ ಆಫ್ ಮಾಡಿ ಹೊರಗೆ ಹೋಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಆರೋಗ್ಯಾಧಿಕಾರಿ ಅವರನ್ನು ಸಂಪರ್ಕಿಸಿ ಅವರನ್ನು ಭೇಟಿ ಮಾಡಿ ನೈತಿಕವಾಗಿ ಧೈರ್ಯ ತುಂಬುವಂತೆ ಸೂಚನೆ ನೀಡಿದ್ದೇನೆ. ಪ್ರಾಮಾಣಿಕತೆಯಿಂದ, ಬದ್ಧತೆಯಿಂದ ಕೆಲಸ ಮಾಡುವವರ ಜತೆ ಸರ್ಕಾರ ಇದೆ. ವೈದ್ಯರು ಯಾರಿಗೂ ಹೆದರುವ ಅಗತ್ಯವಿಲ್ಲ. ಸರ್ಕಾರ ಅವರ ಜತೆಗಿದೆ ಎಂದು ಸ್ಪಷ್ಟಪಡಿಸಿದರು.
ವಿಧಾನಪರಿಷತ್ತಿನಲ್ಲಿ ಇತ್ತೀಚೆಗೆ ನಡೆದ ಘಟನೆ ಎಲ್ಲರೂ ತಲೆತಗ್ಗಿಸುವಂತಹದ್ದು. ರಾಜ್ಯದ ರಾಜಕಾರಣ ಮತ್ತು ಸಂಸದೀಯ ನಡುವಳಿಕೆಗಳು ದೇಶಕ್ಕೆ ಮಾದರಿಯಾಗಿದ್ದವು. ಹೀಗಿರುವಾಗ ಎಲ್ಲರೂ ತಲೆತಗ್ಗಿಸುವಂತಹ ಘಟನೆ ನಡೆದಿರುವುದು ಖಂಡನಾರ್ಹ, ಅದು ಯಾವುದೇ ಪಕ್ಷವಾಗಲೀ ಈ ರೀತಿ ನಡೆದುಕೊಳ್ಳಬಾರದು. ಆದರೆ ಆ ಘಟನೆಗ ತುಪ್ಪ ಹಾಕಿದ್ದ ಮಾತ್ರ ಕಾಂಗ್ರೆಸ್ ಎಂಬುದನ್ನು ಇಡೀ ದೇಶದ ಜನತೆ ಗಮನಿಸಿದೆ. ಇಂತಹ ನಡುವಳಿಕೆಗಳಿಂದಲೇ ಕಾಂಗ್ರೆಸ್ ಸರ್ವನಾಶ ಆಗುವ ದಿನಗಳು ದೂರವಿಲ್ಲ ಎಂದು ಸಚಿವ ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel