ಪುರುಷರ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕನ್ನಡತಿಗೆ ಒಲಿದು ಬಂದಿದೆ. ರಾಜ್ಯದ ಮಾಜಿ ಆಟಗಾರ್ತಿ ವಿಆರ್ ವನಿತಾ ಮುಂಬರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡಲಿರುವ ಶಿವಮೊಗ್ಗ ಲಯನ್ಸ್ ತಂಡಕ್ಕೆ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲು ಸಜ್ಜಾಗಿದ್ದಾರೆ.
33 ವರ್ಷದ ವನಿತಾ ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಮಹಿಳಾ ತಂಡಕ್ಕೆ ಫೀಲ್ಡಿಂಗ್ ಕೋಚ್ ಆಗಿದ್ದರು. ಮಹಿಳಾ ತಂಡದ ಪರ 16 ಏಕದಿನ ಮತ್ತು 6 ಟಿ20 ಪಂದ್ಯ ಆಡಿರುವ ವನಿತಾ, ಕಳೆದ ವರ್ಷ ಫೆಬ್ರವರಿಯಲ್ಲಿ ನಿವೃತ್ತಿ ಹೊಂದಿದ ನಂತರ ಕೋಚಿಂಗ್ನತ್ತ ಗಮನಹರಿಸಿದ್ದಾರೆ.
ಪುರುಷರ ತಂಡಕ್ಕೂ ತರಬೇತಿ ನಿಡುವ ಕುರಿತು ಯೋಚಿಸುತ್ತಿದ್ದೆ. ನಾನು ಸಹಾಯಕ ಕೋಚ್ ಆಗಿಯಾದರೂ ತಂಡ ಸೇರಿಕೊಳ್ಳಬೇಕೆಂದಿದ್ದೆ. ಆದರೆ ಫ್ರಾಂಚೈಸಿಯವರು, ನಾನು ಮುಖ್ಯ ಕೋಚ್ ಆಗುವ ಅರ್ಹತೆ ಹೊಂದಿದ್ದೇನೆ ಎಂದು ವಿಶ್ವಾಸ ತುಂಬಿದರು ಎಂದು ಹೇಳಿದ್ದಾರೆ.
ರ್ಸಿಬಿ ಮಹಿಳಾ ತಂಡದ ಪರ ಹರಾಜಿನಲ್ಲಿ ಭಾಗವಹಿಸಿದ್ದ ಅನುಭವದೊಂದಿಗೆ ವನಿತಾ, ಶನಿವಾರ ನಡೆದ ಮಹಾರಾಜ ಟ್ರೋಫಿ ಆಟಗಾರರ ಹರಾಜಿನಲ್ಲಿ ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ನಿಹಾಲ್ ಉಲ್ಲಾಳ್, ವಿ. ಕೌಶಿಕ್, ರೋಹನ್ ಕದಂ ಅವರಂಥ ರಾಜ್ಯದ ಟಿ20 ತಾರೆಯರನ್ನು ಶಿವಮೊಗ್ಗ ಲಯನ್ಸ್ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.