ಬೆಂಗಳೂರು : ಕ್ರೀಡಾ ವಲಯದಲ್ಲಿ ಪಾಪಚ್ಚಿ ಎಂದೇ ಹೆಚ್ಚು ಚಿರಪರಿಚಿತರಾಗಿದ್ದ ಹಿರಿಯ ಬಾಸ್ಕೆಟ್ ಬಾಲ್ ಆಟಗಾರ ಕೆ.ರಘುನಾಥ್ (74) ಮಂಗಳವಾರ ನಿಧನರಾಗಿದ್ದಾರೆ. ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ತಂಡವನ್ನು ಪ್ರತಿನಿಧಿಸಿದ್ದ ಅವರು, ಮಲ್ಲೇಶ್ವರದಲ್ಲಿರುವ ಬೀಗಲ್ ಬಾಸ್ಕೆಟ್ ಬಾಲ್ ಕ್ಲಬ್ ನ ಸಂಸ್ಥಾಪಕರಲ್ಲಿ ಪ್ರಮುಖರಾಗಿದ್ದಾರೆ. ಇನ್ನು ಮೃತರು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮೂರು ಬಾರಿ ಚಾಂಪಿಯನ್
1964ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ತಂಡಕ್ಕೆ ನಾಯಕರಾಗಿದ್ದ ರಘುನಾಥ್, ತಮ್ಮ ನೇತೃತ್ವದಲ್ಲಿ ತಂಡವನ್ನು ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ರಘುನಾಥ್ ನಿಧನಕ್ಕೆ ರಾಜ್ಯ ಬಾಸ್ಕೆಟ್ ಬಾಲ್ ಸಂಸ್ಥೆ ಹಾಗೂ ಹಿರಿಯ ಹಾಗೂ ಕಿರಿಯ ಆಟಗಾರರು ಸಂತಾಪ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯಲ್ಲಿ 1946ರ ಸೆಪ್ಟೆಂಬರ್ 16ರಂದು ಜನಿಸಿದ್ದ ರಘುನಾಥ್ ಅವರ ಶಿಕ್ಷಣವು ಬೆಂಗಳೂರಿನ ಮಲ್ಲೇಶ್ವರ ಹೈಸ್ಕೂಲ್‌ನಲ್ಲಿ ಆಯಿತು. ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮತ್ತು ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪೂರೈಸಿದ್ದಾರೆ.