ಎರಡನೇ ಬಾರಿ ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಪ್ರಮಾಣ ವಚನ
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಉನ್ನತ ನಾಯಕರು ಭಾಗವಹಿಸಿದ್ದ ಅದ್ಧೂರಿ ಸಮಾರಂಭದಲ್ಲಿ ಡಾ.ಪ್ರಮೋದ್ ಸಾವಂತ್ ಅವರು ಸತತ ಎರಡನೇ ಬಾರಿಗೆ ಗೋವಾದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೆ ಪ್ರಮಾಣ ವಚನ ಬೋಧಿಸಿದರು. ಡಾ.ಪ್ರಮೋದ್ ಸಾವಂತ್ ಅವರೊಂದಿಗೆ ಇತರ ಎಂಟು ಕ್ಯಾಬಿನೆಟ್ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಗೋವಾದ ತಾಲೀಗಾವೊದ ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಸಮಾರಂಭ ನಡೆಯಿತು.
ವಿಶ್ವಜಿತ್ ರಾಣೆ, ಮೌವಿನ್ ಗೊಡಿನ್ಹೋ, ರವಿ ನಾಯಕ್, ನೀಲೇಶ್ ಕಬ್ರಾಲ್, ಸುಭಾಷ್ ಶಿರೋಡ್ಕರ್, ರೋಹನ್ ಖೌಂಟೆ, ಗೋವಿಂದ್ ಗಾವ್ಡೆ, ಅಟಾನಾಸಿಯೊ ಮಾನ್ಸೆರೆಟ್ ಅವರು ಇಂದು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಡಾ ಸಾವಂತ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮತ್ತು ಗೋವಾದ ಮುಖ್ಯಮಂತ್ರಿಯಾಗಿ ಕಳೆದ ಸೋಮವಾರ ಆಯ್ಕೆಯಾದರು.
ಫೆ.14ರಂದು ನಡೆದ ಗೋವಾ ವಿಧಾನಸಭೆ ಚುನಾವಣೆಯಲ್ಲಿ 40 ಸದಸ್ಯ ಬಲದ ಸದನದಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದುಕೊಂಡಿದೆ.ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಮೂವರು ಸ್ವತಂತ್ರ ಶಾಸಕರು ಮತ್ತು ಇಬ್ಬರು ಶಾಸಕರ ಬೆಂಬಲದೊಂದಿಗೆ ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಂಡಿದೆ. ಹೊಸ ಸಚಿವರಿಗೆ ಖಾತೆಗಳು ಇನ್ನೂ ಘೋಷಣೆಯಾಗಿಲ್ಲ.