ಮುಂಬೈ: ಐಪಿಎಲ್ ನ 29ನೇ ಪಂದ್ಯದಲ್ಲಿ ಸಿಎಸ್ ಕೆ ವಿರುದ್ಧ ಕೊನೆಯ ಓವರ್ ಮಾಡಿ ಭಾರೀ ದುಬಾರಿ ಬೌಲರ್ ಎನಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ವಿರುದ್ಧ ಅಭಿಮಾನಿಗಳು ಅಷ್ಟೇ ಅಲ್ಲ, ಹಿರಿಯ ಆಟಗಾರರು ಕೂಡ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಹಿಂದಿನ 2 ಪಂದ್ಯಗಳಲ್ಲಿ ಬೌಲಿಂಗ್ ಮಾಡದ ಪಾಂಡ್ಯ, ಚೆನ್ನೈ ವಿರುದ್ಧ ಬೌಲಿಂಗ್ ಮಾಡಿದ್ದರು. ಅದರಲ್ಲಿಯೂ ಕೊನೆಯ ಓವರ್ ನಲ್ಲಿ ಅತೀ ಹೆಚ್ಚು ರನ್ ಬಿಟ್ಟುಕೊಟ್ಟು ಟೀಕೆ ಎದುರಿಸುತ್ತಿದ್ದಾರೆ. ಪಾಂಡ್ಯ ವಿರುದ್ಧ ಸುನೀಲ್ ಗವಾಸ್ಕರ್, ಇರ್ಫಾನ್ ಪಠಾಣ್ ಸೇರಿದಂತೆ ಹಲವರು ಮಾಜಿ ಆಟಗಾರರು ಆಕ್ರೋಶ ಹೊರ ಹಾಕಿದ್ದಾರೆ.
ಹಾರ್ದಿಕ್ ಪಾಂಡ್ಯ ಕಳಪೆ ಬೌಲಿಂಗ್ ಮಾಡಿದ್ದಾರೆ. ಅವರ ಬೌಲಿಂಗ್ ನಲ್ಲಿ ಪರಿಣಾಮಕಾರಿ ಇರಲಿಲ್ಲ. ಅದು ಸಾಮಾನ್ಯ ಬೌಲಿಂಗ್ ರೀತಿ ಇತ್ತು. ನಾನು ದೀರ್ಘಕಾಲದ ನಂತರ ನೋಡಿದ ಅತ್ಯಂತ ಕೆಟ್ಟ ಬೌಲಿಂಗ್ ಇದಾಗಿತ್ತು. ಯಾವುದೇ ಬ್ಯಾಟರ್‌ಗಳು ಸಾಮಾನ್ಯವಾಗಿ ಸ್ಟ್ರೈಟ್ ಲೆಂತ್ ಬಾಲ್ ಹಾಗೂ ಲೆಗ್‌ಸೈಡ್ ಫುಲ್ ಟಾಸ್ ಬಾಲ್ ನೋಡುತ್ತಾರೆ. ಅಂತಹ ಬೌಲ್ ನ್ನು ಮಾಡಿದ್ದಾರೆ. ಹೀಗಾಗಿ ಮಹಿ ಸಿಕ್ಸರ್ ಅಟ್ಟಿ, ಜನರನ್ನು ರಂಜಿಸಿದ್ದಾರೆ ಎಂದು ಮಾಜಿ ಆಟಗಾರ ಸುನೀಲ್ ಗವಾಸ್ಕಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮಾಜಿ ಆಟಗಾರ ಇರ್ಫಾನ್ ಪಠಾಣ್, ಕೊನೆಯ ಓವರ್ ನಲ್ಲಿ ತಾವೇ ಬೌಲಿಂಗ್ ಗೆ ಇಳಿದಿದ್ದು, ಆಕಾಶ್ ಮಧ್ವಾಲ್ ಬೌಲಿಂಗ್ ಮೇಲಿನ ನಂಬಿಕೆಯ ಕೊರತೆ ತೋರಿಸಿದೆ. ಡೆತ್ ಓವರ್ ಬೌಲರ್ ಆಗಿ ಅವರ ಕೌಶಲ್ಯದ ಕೊರತೆ ತೋರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ ತಂಡ 19 ಓವರ್ ಗಳಲ್ಲಿ 180 ರನ್ ಗಳಿಸಿತ್ತು. ಆದರೆ, ಕೊನೆಯ ಓವರ್ ನಲ್ಲಿ ಬರೋಬ್ಬರಿ 26 ರನ್ ಗಳಿಸಿತು. ಪಾಂಡ್ಯ ಮೊದಲ ಎಸೆತ ಮುಗಿಸುವಷ್ಟರಲ್ಲಿ 2 ವೈಡ್, 1 ಬೌಂಡರಿ ಬಿಟ್ಟು ಕೊಟ್ಟಿದ್ದರು. 2ನೇ ಎಸೆತದಲ್ಲಿ ಡೇರಿಲ್ ಮಿಚೆಲ್ ಕ್ಯಾಚ್ ನೀಡಿದರು. ನಂತರ ಕಣಕ್ಕೆ ಬಂದ ಧೋನಿ, 3, 4, 5ನೇ ಎಸೆತಗಳನ್ನು ಸತತವಾಗಿ ಹ್ಯಾಟ್ರಿಕ್ ಸಿಕ್ಸರ್ ಗೆ ಕಳಿಸಿದರು. ಕೊನೆಯ ಎಸೆತದಲ್ಲಿ 2 ರನ್ ಗಳಿಸಿದರು. ಹೀಗಾಗಿ ಚೆನ್ನೈ ತಂಡವು 200ರ ಗಡಿ ದಾಟುವಂತಾಯಿತು. ಪಾಂಡ್ಯ ಒಟ್ಟಾರೆ ಈ ಪಂದ್ಯದಲ್ಲಿ 3 ಓವರ್ ಗಳಲ್ಲಿ 43 ರನ್ ಬಿಟ್ಟುಕೊಟ್ಟು, 2 ವಿಕೆಟ್ ಪಡೆದಿದ್ದಾರೆ.