ಬೆಂಗಳೂರು: ಶನಿವಾರ ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆಯಾಗಿದ್ದು, ಹಲವಡೆ ಜನ- ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಕಲಬುರಗಿ ಜಿಲ್ಲೆಯಲ್ಲಿ ಮಳೆಗೆ ಬಾಲಕ ಬಲಿಯಾಗಿದ್ದಾನೆ. ವಿಜಯನಗರದ ಕೊಟ್ಟೂರಿನಲ್ಲಿ ಮನೆ ಛಾವಣಿ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ.
ನಗರ ಸೇರಿದಂತೆ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ಆಳಂದ ತಾಲೂಕಿನ ನರೋಣಾ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವನ್ನಪ್ಪಿದ್ದಾನೆ. ಜಮೀನಿನಿಂದ ಎತ್ತಿನ ಗಾಡಿಯಲ್ಲಿ ಮನೆಗೆ ಮರಳುತ್ತಿದ್ದಾಗ ಬಾಲಕನಿಗೆ ಸಿಡಿಲು ಬಡಿದಿದೆ. ಈ ವೇಳೆ ಬಾಲಕ ಮಹೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಗಾಳಿ ಹಾಗೂ ಮಳೆಯಿಂದಾಗಿ ಜಿಲ್ಲೆಯ ಹಲವು ಭಾಗದಲ್ಲಿ ಜನ ಜೀವನ ಅಸ್ತವ್ಯಸ್ಥಗೊಂಡಿತ್ತು. ಗಂಟೆಗೂ ಹೆಚ್ಚು ಕಾಲ ಸುರಿದ ಭಾರೀ ಗಾಳಿ ಸಹಿತ ಮಳೆಗೆ ಬೈಕ್‌ಗಳು ಕೊಚ್ಚಿ ಹೋಗಿವೆ. ಆಳಂದ ತಾಲ್ಲೂಕಿನ ಹಲವೆಡೆ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಹಲವೆಡೆ ಭಾರೀ ಗಾಳಿ ಕೂಡ ಬೀಸಿದ್ದು, ಗಾಳಿಗೆ ಲಾರಿಯೇ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಖಜೂರಿಯಲ್ಲಿ ನಡೆದಿದೆ. ನೂರಾರು ಮರಗಳು ಧರೆಗೆ ಉರುಳಿವೆ. ಮೃತಪಟ್ಟಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಶನಿವಾರ ಕೂಡ ಮಳೆಯಾಗಿದ್ದು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ನೂರಾರು ಮರಗಳು ಬಿದ್ದಿವೆ. ಶಿವಮೊಗ್ಗದಲ್ಲಿ ಮಳೆಗೆ ಮನೆ ಕುಸಿದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ ಜೊತೆ ಗುಡುಗು ಸಹಿತ ಮಳೆಯಾಗಿದೆ. ಭಟ್ಕಳದಲ್ಲಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದೆ.