ಮೈದಾನದಲ್ಲಿ ಶತ್ರುಗಳು… ಆದ್ರೆ ನಿಜ ಜೀವನದಲ್ಲಿ ಆಪ್ತ ಸ್ನೇಹಿತರು. ತಂಡದೊಳಗಿನ ಒಡನಾಡಿಗಳೇ ವಿಲನ್ ಗಳು.. ಎದುರಾಳಿ ತಂಡಗಳ ಆಟಗಾರರೇ ಹೀರೋಗಳು..ಸ್ಪಾಟ್ ಫೀಕ್ಸಿಂಗ್ ಆರೋಪ, ಉದ್ದೀಪನಾ ದ್ರವ್ಯ ಸೇವನೆ ಆರೋಪ, ಅಲ್ಕೋಹಾಲ್, ಸಿಗರೇಟ್.. ಸೆಕ್ಸ್…ವಿವಾದಗಳು.. ವಿಶ್ವ ದಾಖಲೆಗಳು ಎಲ್ಲವೂ ಕೂಡ ಸ್ಪಿನ್ ಡಾಕ್ಟರ್ ಶೇನ್ ವಾರ್ನ್ ಕ್ರಿಕೆಟ್ ಬದುಕಿನಲ್ಲಿ ಆಗಿ ಹೋಗಿರುವ ಘಟನೆಗಳು.
ಒಬ್ಬ ವ್ಯಕ್ತಿಯಾಗಿ ಶೇನ್ ವಾರ್ನ್ ಆದರ್ಶ ವ್ಯಕ್ತಿ ಅಂತ ಹೇಳುವುದಕ್ಕೆ ಆಗಲ್ಲ. ಆದ್ರೆ ಒಬ್ಬ ಕ್ರಿಕೆಟಿಗನಾಗಿ ಖಂಡಿತವಾಗಿಯೂ ಸ್ಫೂರ್ತಿಯ ಆಟಗಾರ. ಒಬ್ಬ ಸ್ಪಿನ್ ಬೌಲರ್ ಆಗಿ ಮಾದರಿ ಆಟಗಾರ. ಆದ್ರೆ ಶೇನ್ ವಾರ್ನ್ ಅವರನ್ನು ರೋಲ್ ಮಾಡೆಲ್ ಅಂತ ಪರಿಗಣಿಸುವುದು ಕಷ್ಟ. ಕ್ರಿಕೆಟ್ ಮೈದಾನದಲ್ಲಿ ಶೇನ್ ವಾರ್ನ್ ಮಾಡಿರುವ ಮೋಡಿಗೆ ದಾಖಲೆಗಳು ಕೂಡ ಸದ್ದಿಲ್ಲದೆ ಅವರ ಹೆಸರಿನ ಜೊತೆ ಸೇರಿಕೊಂಡಿವೆ. ಹಾಗೇ ವಿವಾದಗಳು ಕೂಡ ಕಪ್ಪುಚುಕ್ಕೆಗಳಾಗಿ ಅವರ ಹೆಸರಿನ ಮುಂದೆ ಅಂಟಿಕೊಂಡಿವೆ. ಹಾಗಂತ ಶೇನ್ ವಾರ್ನ್ ತೀರಾ ಒಳ್ಳೆಯವರು ಅಲ್ಲ. ತೀರಾ ಕೆಟ್ಟವರೂ ಅಲ್ಲ. ಆದ್ರೂ ಎಲ್ಲರು ಕೂಡ ಇಷ್ಟಪಡುವ ವ್ಯಕ್ತಿ.. ತುಂಬಾನೇ ಪ್ರೀತಿಸುವ ಕ್ರಿಕೆಟಿಗ. ಮೈದಾನದಲ್ಲಿ ಎಷ್ಟು ಆಕ್ರಮಣಕಾರಿಯಾಗಿ ಆಡುತ್ತಿದ್ದರೋ ಅಷ್ಟೇ ಹಾಸ್ಯಮಯ ವ್ಯಕ್ತಿ. ವಿಕೆಟ್ ಪಡೆದಾಗ ತುಂಬಾನೇ ಸಂಭ್ರಮಪಡುತ್ತಿದ್ದರು. ಹಾಗೇ ತನ್ನ ಎಸೆತಗಳನ್ನು ದಂಡಿಸುತ್ತಿರುವಾಗ ಮೂಖ ಪ್ರೇಕ್ಷಕನಾಗುತ್ತಿದ್ದರು. ಒಂದು ಕೈಯನ್ನು ಕಟ್ಟಿಕೊಂಡು, ಇನ್ನೊಂದು ಕೈಯ ಹೆಬ್ಬೆರಳನ್ನು ದವಡೆಯ ಮೇಲಿಟ್ಟುಕೊಂಡು, ತೋರು ಬೆರಳನ್ನು ಮೂಗಿನ ಮೇಲಿಟ್ಟುಕೊಂಡು ಕಿರು ನಗೆಯನ್ನು ಬೀರುತ್ತಿದ್ದರು. ಇದು ಶೇನ್ ವಾರ್ನ್ ಕ್ರಿಕೆಟ್ ಬದುಕಿನ ಸ್ಟೈಲ್.
ಶೇನ್ ವಾರ್ನ್ ಕಷ್ಟಪಟ್ಟು ಕ್ರಿಕೆಟ್ ಆಟಗಾರನಾದ್ರು. ಬದುಕಿಗಾಗಿ ಲಾರಿ ಡ್ರೈವರ್ ಆಗಿದ್ದರು. ಡೆಲಿವರಿ ಬಾಯ್ ಆಗಿದ್ದರು. ಹೀಗೆ ಕಷ್ಟಪಟ್ಟು ಕ್ರಿಕೆಟ್ ಆಟಗಾರನಾಗಿ ರೂಪುಗೊಂಡಿರುವ ಶೇನ್ ವಾರ್ನ್ ಮುಂದೊಂದು ದಿನ ವಿಶ್ವದ ಶ್ರೇಷ್ಠ ಕ್ರಿಕೆಟಿಗನಾಗಿ ರೂಪುಗೊಂಡ್ರು. ಕ್ರಿಕೆಟ್ ನಲ್ಲಿ ಯಶ ಸಾಧಿಸುತ್ತಿದ್ದಂತೆ ತನ್ನ ಹಳೆಯದ ಕಷ್ಟದ ದಿನಗಳನ್ನು ಮರೆತುಬಿಟ್ರು. ಐಶಾರಾಮಿ ಬದುಕಿನ ಜೊತೆಗೆ ಕುಡಿತ, ಸಿಗರೇಟ್, ಸೆಕ್ಸ್, ವಿವಾದಗಳಿಂದಲೂ ಹೆಚ್ಚು ಸುದ್ದಿಯಾದ್ರು. ಆದ್ರೂ ಶೇನ್ ವಾರ್ನ್ ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಹಾಸ್ಯ ಪ್ರವೃತ್ತಿಯ ಜೊತೆಗೆ ಸಂಬಂಧಗಳಿಗೆ ಬೆಲೆ ಕೊಡುವ ಶೇನ್ ವಾರ್ನ್ ಗೆ ವಿಶ್ವದ ಶ್ರೇಷ್ಠ ಕ್ರಿಕೆಟಿಗರು ಆಪ್ತ ಸ್ನೇಹಿತರಾದ್ರು. ಈ ನಡುವೆ, ತನ್ನ ಕ್ರಿಕೆಟ್ ಬದುಕಿಗೆ ಪ್ರೇರಣೆ ಮತ್ತು ಶಕ್ತಿ ತುಂಬಿದ್ದ ಸ್ಟೀವ್ ವಾ ಅವರ ವಿರುದ್ಧವೇ ತಿರುಗಿಬಿದ್ದಿದ್ದರು. ತನ್ನ ಆಟೋ ಬಯೋಗ್ರಫಿಯಲ್ಲಿ ಸ್ಟೀವ್ ವಿರುದ್ಧವೇ ಬರೆದಿದ್ದರು. ಅಷ್ಟೇ ಅಲ್ಲ, ಮೈದಾನದಲ್ಲಿ ತನಗೆ ಸವಾಲು ಹಾಕೊಂಡು ಎದುರಾಳಿಗಳಾಗಿದ್ದ ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾನಂತಹ ಆಟಗಾರರನ್ನು ಮೆಚ್ಚಿ ಕೊಂಡಾಡಿದ್ದರು.
ಇನ್ನು ಶೇನ್ ವಾರ್ನ್ ಮತ್ತು ಭಾರತೀಯ ಆಟಗಾರರ ನಡುವೆ ಉತ್ತಮವಾದ ಬಾಂಧವ್ಯವಿತ್ತು. ಭಾರತ ವಿರುದ್ಧವೇ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅಷ್ಟೇ ಅಲ್ಲ, 2008ರ ಚೊಚ್ಚಲ ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಜೊತೆಗೆ ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಮಾರ್ಗದರ್ಶಕರಾಗಿದ್ದರು. ಹೀಗೆ ಭಾರತೀಯ ಆಟಗಾರರು ಮತ್ತು ಭಾರತದ ಯುವ ಆಟಗಾರರ ಜೊತೆ ಶೇನ್ ವಾರ್ನ್ ತುಂಬಾ ಪ್ರೀತಿಯಿಂದ ಬೆರೆಯುತ್ತಿದ್ದರು.
145 ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್ ಹಾಗೂ 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಪಡೆದಿರುವ ಶೇನ್ ವಾರ್ನ್ ಒಟ್ಟು 1001 ಅಂತಾರಾಷ್ಟ್ರೀಯ ವಿಕೆಟ್ ಗಳನ್ನು ಕಬಳಿಸಿದ್ದಾರೆ. ಸದ್ಯ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಎರಡನೇ ಆಟಗಾರನಾಗಿದ್ದಾರೆ. ಇನ್ನೊಂದೆಡೆ 1993ರ ಆಶಷ್ ಸರಣಿಯಲ್ಲಿ ಇಂಗ್ಲೆಂಡ್ ನ ಮೈಕ್ ಗ್ಯಾಟಿಂಗ್ ಅವರ ವಿಕೆಟ್ ಪಡೆದಿರುವುದು ಶತಮಾನದ ಎಸೆತ ಅಂತನೇ ಕರೆಯಲಾಗುತ್ತಿದೆ. ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮೆನ್ ಗಳನ್ನು ಗಲಿಬಿಲಿಗೊಳಿಸುತ್ತಿದ್ದ ಶೇನ್ ವಾರ್ನ್ ಚಾಣಕ್ಯ ಬೌಲರ್ ಎಂಬುದರಲ್ಲಿ ಎರಡು ಮಾತಿಲ್ಲ. ತನ್ನ 52ನೇ ವಯಸ್ಸಿನಲ್ಲಿ ಈ ಲೋಕದ ಯಾತ್ರೆ ಮುಗಿಸಿದ ಶೇನ್ ವಾರ್ನ್ ಸಾಧನೆ, ಮಾಡಿರುವ ದಾಖಲೆಗಳು ಎಂದೆಂದಿಗೂ ಕ್ರಿಕೆಟ್ ಇತಿಹಾಸದಲ್ಲಿ ಶಾಶ್ವತವಾಗಿರುತ್ತವೆ.