ದೆಹಲಿ : ನಾಳೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ನಡೆಯಲಿದ್ದು, ಈ ಐತಿಹಾಸಿಕ ಸಮಾರಂಭಕ್ಕೆ ಸಾಮಾಜಿಕ ಕಾರ್ಯಕರ್ತ, ಸಾವಿರಾರು ಅನಾಥ ಶವಗಳ ಸಂಸ್ಕಾರ ಮಾಡಿರುವ, ಪದ್ಮಶ್ರೀ ಪುರಸ್ಕೃತ ಮೊಹಮದ್ ಶರೀಫ್ (ಶರೀಫ್ ಚಾಚಾ) ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನು ಶರೀಫ್ ಚಾಚಾ ಎಂದೇ ಕರೆಸಿಕೊಳ್ಳುವ ಮೊಹಮದ್ ಶರೀಫ್ ಅವರು ಕಳೆದ 27 ವರ್ಷಗಳಿಂದ ಫೈಜಾಬಾದ್‌ನಲ್ಲಿ ಅನಾಥ ಶವಗಳ ಸಂಸ್ಕಾರ ಮಾಡಿಕೊಂಡು ಬಂದಿದ್ದಾರೆ. ಆಯೋಧ್ಯೆಯಲ್ಲಿ ಸೈಕಲ್ ಶಾಪ್ ನಡೆಸುತ್ತಿರುವ ಅವರು, ಸಣ್ಣ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ.
ನಾಳೆಯ ಐತಿಹಾಸಿಕ ಕಾರ್ಯಕ್ರಮಕ್ಕೆ ಅಯೋಧ್ಯೆ ಸಿದ್ಧವಾಗಿದ್ದು, ಪ್ರಧಾನಿ ಮೋದಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಿದ್ದಾರೆ. ಅಯೋಧ್ಯೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.