Shimogga Subbanna : ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ..
ಹಿನ್ನೆಲೆ ಗಾಯನಕ್ಕಾಗಿ ಕನ್ನಡದಲ್ಲಿ ಮೊದಲ ರಾಷ್ಟ್ರ ಪ್ರಶಸ್ತಿ ಗಳಿಸಿದ್ದ ಖ್ಯಾತ ಗಾಯಕ ಹಾಗೂ ವಕೀಲರೂ ಆದ ಶಿವಮೊಗ್ಗ ಸುಬ್ಬಣ್ಣ ಅವರು ವಿಧಿವಶರಾಗಿದ್ದಾರೆ.. ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. “ಶ್ರೇಷ್ಠ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಕನ್ನಡ ಹಾಡುಗಳು ಮತ್ತು ಸಂಗೀತಾಭಿಮಾನಿಗಳ ಮನೆಮಾತಾಗಿದ್ದರು. ಅವರ ಹಾಡುಗಳು ಅಪಾರ ಮೆಚ್ಚುಗೆ ಪಡೆದಿವೆ ಮತ್ತು ಕನ್ನಡ ಕಾವ್ಯದ ಮುತ್ತುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನಗಳಾಗಿವೆ. ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ.”
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಕನ್ನಡ ಭಾವಗೀತೆಗಳಿಗೆ ಜೀವತುಂಬಿದ, ಕನ್ನಡದ ಮೊದಲ ರಜತ ಕಮಲ ಪ್ರಶಸ್ತಿಗೆ ಭಾಜನರಾದ ಅಪ್ರತಿಮ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಅಗಲಿಕೆ ಕನ್ನಡ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿಃ
ಸುಗಮ ಸಂಗೀತ ಕ್ಷೇತ್ರದಲ್ಲಿ ಅನೇಕ ಹಾಡುಗಳನ್ನ ಹಾಡಿರುವ ಇವರಿಗೆ ಕಾಡು ಕುದುರೆ ಸಿನಿಮಾದ ಕಾಡು ಕುದುರೆ ಓಡಿಬಂದಿತ್ತಾ ಹಿನ್ನೆಲೆ ಗಾಯನಕ್ಕೆ 1979ರಲ್ಲಿ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಇದು ಹಿನ್ನೆಲೆ ಗಾಯನದಲ್ಲಿ ಕನ್ನಡಕ್ಕೆ ಒಲಿದ ಮೊದಲ ರಾಷ್ಟ್ರಪ್ರಶಸ್ತಿಯಾಗಿತ್ತು… ಇದರ ಹೊರತಾಗಿ ರಜತ ಕಮಲ, ಶಿಶುನಾಳ ಷರಿಫ್ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನ ಗೆದ್ದಿದ್ದರು. ಆನಂದಮಯ ಈ ಜಗ ಹೃದಯ ಇದು ಇವರು ಧ್ವನಿ ನೀಡಿರುವ ಮತ್ತೊಂದು ಜನಪ್ರಿಯ ಹಾಡು.