ಕೋವಿಡ್ ಸಂಕಷ್ಟದಲ್ಲೂ ಶ್ರೀ ಚರಣ್ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ 1.37 ಕೋಟಿ ಲಾಭ..!
2022ರಲ್ಲಿ ಬ್ಯಾಂಕ್‍ನ ರಜತ ಮಹೋತ್ಸವ ಆಚರಣೆ
ಬ್ಯಾಂಕ್‍ನ ಎಲ್ಲಾ ಸದಸ್ಯರಿಗೆ 2022ರಲ್ಲಿ ಡಿವಿಡೆಂಟ್ ವಿತರಣೆ
ಬೆಂಗಳೂರು : ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ಪ್ರಾರಂಭವಾಗಿರುವ ಬಸವನಗುಡಿಯ ಶ್ರೀ ಚರಣ್ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಲಿ., ಕೋವಿಡ್ ಸಾಂಕ್ರಾಮಿಕ ಸಂಕಷ್ಟದ ನಡುವೆಯೂ 2021ರ ಮಾರ್ಚ್ 3ರಂತೆ 1.37 ಕೋಟಿಗೂ ಅಧಿಕ ನಿವ್ವಳ ಲಾಭ ಗಳಿಸಿದೆ.
ಶ್ರೀ ಚರಣ್ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕಿನ 25 ನೇ ವಾರ್ಷಿಕ ಸರ್ವಸದಸ್ಯರ ವರ್ಚುಯಲ್ ಸಭೆಯಲ್ಲಿ ಈ ಬಗ್ಗೆ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಬಿ.ವಿ. ದ್ವಾರಕಾನಾಥ್ ಶನಿವಾರ ಮಾತನಾಡಿದರು.
`2020-21ರಲ್ಲಿ ಬ್ಯಾಂಕ್‍ಗೆ ಒಟ್ಟಾರೆ 7 ಕೋಟಿ ರೂ. ಲಾಭ ಬಂದಿದೆ.
ಈ ಪೈಕಿ ನಿವ್ವಳ ಲಾಭ ಗಳಿಕೆಯಾಗಿರುವುದು 1.37 ಕೋಟಿ ರೂ. (1,37,96,051.79 ರೂ.)ಗೂ ಅಧಿಕ. ಕೊರೋನಾ ಇಲ್ಲದಿದ್ದರೆ ಮತ್ತಷ್ಟು ಲಾಭ ಕಾಣಬಹುದಿತ್ತು. ಆದರೂ ಕೊವಿಡ್ ನಡುವೆಯೂ ಉತ್ತಮ ವಹಿವಾಟಿನೊಂದಿಗೆ ಇಷ್ಟು ಪ್ರಮಾಣದಲ್ಲಿ ಲಾಭ ಗಳಿಕೆ ಮಾಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ’ ಎಂದು ಬಿ.ವಿ. ದ್ವಾರಕಾನಾಥ್ ತಿಳಿಸಿದರು.
2021ನೇ ಸಾಲಿನಲ್ಲಿಯೇ ನಮ್ಮ ಬ್ಯಾಂಕಿನ ರಜತ ಮಹೋತ್ಸವ (25ನೇ ವಾರ್ಷಿಕೋತ್ಸವ) ಆಚರಿಸಬೇಕಿತ್ತು. ಆದರೆ ಕೋವಿಡ್‍ನಿಂದಾಗಿ ಆಚರಿಸಲಾಗಲಿಲ್ಲ. ಹೀಗಾಗಿ 2022ರಲ್ಲಿ ರಜತ ಮಹೋತ್ಸವ ಆಚರಿಸಿ, ನಮ್ಮ ಬ್ಯಾಂಕಿನ ಲಾಭಾಂಶವನ್ನು ಆಧರಿಸಿ ಎಲ್ಲಾ ಸದಸ್ಯರಿಗೆ ಡಿವಿಡೆಂಟ್ ನೀಡಲಾಗುವುದು. ಜತೆಗೆ ಇತರೆ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ದ್ವಾರಕಾನಾಥ್ ಸಂತಸದ ಸುದ್ದಿಯನ್ನು ಹಂಚಿಕೊಂಡರು. ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕೆ. ರಾಮಮೂರ್ತಿ ಹಾಗೂ ಬ್ಯಾಂಕಿನ ನಿರ್ದೇಶಕರು ಉಪಸ್ಥಿತರಿದ್ದರು.