ಕಾಂಗ್ರೆಸ್ ನಾಯಕನಿಲ್ಲದ ಪಕ್ಷ : ಶ್ರೀರಾಮುಲು
ಬಳ್ಳಾರಿ: ಸಿದ್ದರಾಮಯ್ಯನವೇರೆ ಅವರು, ಅವರಿವರ ಮಕ್ಕಳ ಮೇಲೆ ಆಣೆ ಮಾಡಿ ಎನ್ನುವ ನೀವು ಮೊದಲು ನಿಮ್ಮ ಮಕ್ಕಳ ಮೇಲೆ ಆಣೆ ಮಾಡಿ ಎಂದು ಸಾರಿಗೆ ಸಚಿವ ಶ್ರೀರಾಮುಲು ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಈ ದೇಶದ ಪ್ರಧಾನಿಯಾದವರು, ಆದರೆ ಸಿದ್ದರಾಮಯ್ಯ ದೇವೇಗೌಡರಿಗೆ ಏಕ ವಚನ ಪ್ರಯೋಗ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಇನ್ನೂ ಕಾಂಗ್ರೆಸ್ ದೇಶದಲ್ಲೇ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದು, ಕಾಂಗ್ರೆಸ್ ಒಬ್ಬ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರನ್ನು ಸೆಳೆಯಲು ಯತ್ನಿಸಿತ್ತು. ಆದರೆ ಆ ವ್ಯಕ್ತಿ ಕಾಂಗ್ರೆಸ್ ಪಕ್ಷವನ್ನೇ ತಿರಸ್ಕಾರ ಮಾಡಿದ್ದಾರೆ. ಇವತ್ತು ಕಾಂಗ್ರೆಸ್ ನಾಯಕನಿಲ್ಲದ ಪಕ್ಷವಾಗಿದೆ ಎಂದು ಟೀಕಿಸಿದರು.
ಬಿಜೆಪಿಗೆ ನಾನು ನಿಷ್ಠವಂತ ಕಾರ್ಯಕರ್ತನಾಗಿದ್ದೇನೆ. ರಾಜ್ಯ ಬಿಜೆಪಿ ಮುಂದಿನ ಚುನಾವಣೆಗೆ ಅಭ್ಯರ್ಥಿಗಳ ಬಗ್ಗೆ ಸಮಿಕ್ಷೆ ಮಾಡಿಸುತ್ತಿದೆ. ಎಷ್ಟು ಸೀಟು ಬರಬಹುದು, ಯಾರು ಗೆಲ್ಲಬಹುದು, ಯಾರು ಸೋಲಬಹುದು ಎಂದು ಸಮಿಕ್ಷೆ ಮಾಡುತ್ತಿದ್ದಾರೆ. ನಾನು ವಿಶೇಷ ಸರ್ವೆ ಮಾಡಿಸುತ್ತಿಲ್ಲ, ಅದನ್ನು ಪಕ್ಷ ಮಾಡಿಸುತ್ತಿದೆ. ನನ್ನ ಆಸೆ ಬಳ್ಳಾರಿಗೆ ಇರಬಹುದು, ಆದರೆ ಪಾರ್ಟಿ ಎಲ್ಲಿಗೆ ಕಳಿಸುತ್ತದೆಯೋ ಅಲ್ಲಿ ಸ್ಪರ್ಧಿಸುವೆ ಎಂದು ಸ್ಪಷ್ಟಪಡಿಸಿದರು.