ತೈಲ ಖರೀದಿಗಾಗಿ ಭಾರತದ ಬಳಿ 500 ಮಿಲಿಯನ್ ಡಾಲರ್ ಸಾಲ ಕೇಳಿದ ಶ್ರೀಲಂಕಾ
ಶ್ರೀಲಂಕಾವು ತೈಲ ಖರೀದಿ ಮಾಡಲು ಭಾರತದ ಬಳಿ 500 ಮಿಲಿಯನ್ ಡಾಲರ್ ಸಾಲಕ್ಕೆ ಮನವಿ ಮಾಡಿಕೊಂಡಿದೆ. ವಿದೇಶಿ ವಿನಿಮಯ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ಕಚ್ಚಾ ತೈಲ ಖರೀದಿಗಾಗಿ ಭಾರತದಿಂದ ಸುಮಾರು 3,751 ಕೋಟಿ. ರೂ ಸಾಲಕ್ಕೆ ಮನವಿ ಮಾಡಿದೆ. ಶ್ರೀಲಂಕಾದಲ್ಲಿನ ಇಂಧನದ ಲಭ್ಯತೆಯನ್ನು ಮುಂದಿನ ಜನವರಿವರೆಗೆ ಮಾತ್ರ ಖಾತರಿಪಡಿಸಲು ಸಾಧ್ಯ ಎಂದು ಇಂಧನ ಸಚಿವ ಉದಯ ಗಮ್ಮನಪಿಲ ಅವರು ಎಚ್ಚರಿಕೆ ನೀಡಿದ ಕೆಲವೇ ದಿನಗಳಲ್ಲಿ ಶ್ರೀಲಂಕಾ ಭಾರತದ ಬಳಿ ಸಾಲ ಕೇಳಿದೆ.
ಇನ್ನೂ ಸರ್ಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ದೇಶದ ಎರಡು ಪ್ರಮುಖ ರಾಷ್ಟ್ರೀಯ ಬ್ಯಾಂಕ್ ಗಳಾದ ಬ್ಯಾಂಕ್ ಆಫ್ ಸಿಲೋನ್ ಮತ್ತು ಪೀಪಲ್ಸ್ ಬ್ಯಾಂಕ್ ಬಳಿ ಸುಮಾರು 24,761 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರೋದಾಗಿ ತಿಳಿದುಬಂದಿದೆ.
ಅಂತರ್ಜಾತಿ ವಿವಾಹವಾಗಿದ್ದ ಜೋಡಿಯ ಕತ್ತು ಸೀಳಿ ಬರ್ಬರ ಹತ್ಯೆ
ದೇಶದ ತೈಲ ವಿತರಕರು ಮಧ್ಯಪ್ರಾಚ್ಯದಿಂದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು ಸಿಂಗಾಪುರ ಸೇರಿದಂತೆ ಇತರ ಪ್ರದೇಶಗಳಿಂದ ಸಂಸ್ಕರಿಸಿದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಭಾರತ-ಶ್ರೀಲಂಕಾ ಆರ್ಥಿಕ ಪಾಲುದಾರಿಕೆ ವ್ಯವಸ್ಥೆ ಅಡಿಯಲ್ಲಿ 3,751 ಕೋಟಿ ನೆರವು ಪಡೆಯಲು ಸಾಧ್ಯವೇ ಎಂಬುದರ ನಿಟ್ಟಿನಲ್ಲಿ ಭಾರತದ ಹೈಕಮಿಷನರ್ ಮೂಲಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಿಪಿಸಿ ಅಧ್ಯಕ್ಷ ಸುಮಿತ್ ವಿಜಯ ಸಿಂಘೆ ಹೇಳಿರುವುದಾಗಿ ವರದಿಯಾಗಿದೆ.
ಭಾರತದಿಂದ ನೆರವು ಲಭ್ಯವಾದರೆ ಅದನ್ನು ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಲು ಬಳಸಿಕೊಳ್ಳಲಾಗುವುದು ಎಂದು ಸುಮಿತ್ ವಿಜಯ ಸಿಂಘೆ ಹೇಳಿದ್ದಾರೆ. ಅಲ್ಲದೇ ಭಾರತ ಮತ್ತು ಲಂಕಾದ ಇಂಧನ ಕಾರ್ಯದರ್ಶಿಗಳು ಶೀಘ್ರದಲ್ಲೇ ಸಾಲ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಹಣಕಾಸು ಕಾರ್ಯದರ್ಶಿ ಎಸ್ ಆರ್ ಅತ್ತಿಗಳೆ ಹೇಳಿದ್ದಾರೆ.