ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ನವದೆಹಲಿ ಮ್ಯಾರಾಥಾನ್ ಗೆದ್ದ ಶ್ರೀನು ಬುಗಥಾ

1 min read
Shrinu Bugatha

ಒಲಿಂಪಿಕ್ಸ್ ಅರ್ಹತೆ ಗುರಿಯನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಶ್ರೀನು

ನವದೆಹಲಿ: ವಿಝಿಯನಗರಂನ ಶ್ರೀನು ಬುಗಥಾ ಇಲ್ಲಿ ಭಾನುವಾರ ನಡೆದ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ನವದೆಹಲಿ ಮ್ಯಾರಾಥಾನ್ ಓಟದಲ್ಲಿ ಟೋಕಿಯೋ ಒಲಿಂಪಿಕ್ಸ್‍ನ ಅರ್ಹತಾ ಗುರಿಯನ್ನು ಕೆಲವೇ ಕೆಲವು ನಿಮಿಷಗಳಲ್ಲಿ ತಪ್ಪಿದರು. ಆದರೆ ಸ್ಪರ್ಧೆಯಲ್ಲಿ ಸುಲಭವಾಗಿ ಗೆದ್ದ ಶ್ರೀನು ಚಾಂಪಿಯನ್ ಆಗಿ ಹೊರಹೊಮ್ಮಿದರು.

ಆರ್ಮಿ ಕ್ರೀಡಾ ಸಂಸ್ಥೆಯ ಅಗ್ರ ಓಟಗಾರ ತಮ್ಮ ವೈಯಕ್ತಿಕ ಶ್ರೇಷ್ಠ 2 ಗಂಟೆ 14 ನಿಮಿಷ 59 ಸೆಕೆಂಡ್‍ಗಳಲ್ಲಿ ಓಟ ಪೂರ್ಣಗೊಳಿಸಿದರು. ಒಲಿಂಪಿಕ್ಸ್‍ಗೆ ಅರ್ಹತೆ ಪಡೆಯಲು ಓಟವನ್ನು 2 ಗಂಟೆ 11 ನಿಮಿಷ 30 ಸೆಕೆಂಡ್‍ಗಳಲ್ಲಿ ಮುಗಿಸಬೇಕಿತ್ತು.

ಒಲಿಂಪಿಕ್ಸ್‍ನಲ್ಲಿ ಸತತ 3ನೇ ಬಾರಿಗೆ ಸ್ಪರ್ಧಿಸುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಸುಧಾ ಸಿಂಗ್, 2 ಗಂಟೆ 43 ನಿಮಿಷ 31 ಸೆಕೆಂಡ್‍ಗಳಲ್ಲಿ ಓಟ ಮುಗಿಸಿ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಆದರೆ ಟೋಕಿಯೋ ಒಲಿಂಪಿಕ್ಸ್‍ಗೆ ಅರ್ಹತೆ ಗಳಿಸಲು ಈ ಪ್ರಯತ್ನ ಸಾಕಾಗಲಿಲ್ಲ. ಒಲಿಂಪಿಕ್ಸ್ ಅರ್ಹತೆಗೆ ಸುಧಾ ರಾಷ್ಟ್ರೀಯ ದಾಖಲೆ ಕೂಡ ಆದ 2 ಗಂಟೆ 30 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಬೇಕಿತ್ತು.

ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಹಾಜರಿದ್ದ ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು, ಒಲಿಂಪಿಕ್ಸ್‍ನಲ್ಲಿ ದೇಶವನ್ನು ಪ್ರತಿನಿಧಿಸುವ ತಮ್ಮ ಕನಸನ್ನು ಬೆನ್ನತ್ತುವ ಪ್ರಯತ್ನವನ್ನು ಮುಂದುವರಿಸುವಂತೆ ಇಬ್ಬರು ಅಗ್ರ ಓಟಗಾರರಿಗೆ ಸಲಹೆ ನೀಡಿದರು.

Shrinu Bugatha

‘ನಿಮ್ಮ ಗೆಲುವು ಹಾಗೂ ಒಲಿಂಪಿಕ್ಸ್‍ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ನೀವು ತೋರಿದ ಪ್ರಯತ್ನಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಆದಷ್ಟು ಬೇಗ ಉತ್ತಮ ಪ್ರತಿಫಲ ದೊರೆಯಲಿದೆ ಎನ್ನುವ ನಂಬಿಕೆ ನನಗಿದೆ. ಸದ್ಯದಲ್ಲೇ ನೀವು ಲಯ ಕಂಡುಕೊಳ್ಳುತ್ತೀರಿ ಎನ್ನುವ ವಿಶ್ವಾಸವಿದೆ’ ಎಂದು ಕಿರೆನ್ ರಿಜಿಜು ಹೇಳಿದರು.

ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್‍ಐ) ಹಾಗೂ ಫಿಟ್ ಇಂಡಿಯಾದ ಮಾನ್ಯತೆಯೊಂದಿಗೆ ಎನ್‍ಇಬಿ ಸ್ಪೋಟ್ರ್ಸ್ ಆಯೋಜಿಸಿದ ನವದೆಹಲಿ ಮ್ಯಾರಾಥಾನ್‍ನ ಶೀರ್ಷಿಕೆ ಪ್ರಾಯೋಜಕರಾದ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್‍ನ ಚೀಫ್ ಮಾರ್ಕೆಟಿಂಗ್ ಅಧಿಕಾರಿ ಕಾರ್ತಿಕ್ ರಾಮನ್, ಶ್ರೀನು ಬುಗತಾ ತಮ್ಮ ಓಟದ ಅರ್ಧ ದೂರ ತಲುಪಿದ್ದಾಗ ರೇಸ್ ಹೆಡ್ ಕ್ವಾರ್ಟರ್ಸ್‍ನಲ್ಲಿ ಎಲ್ಲರೂ ಬಹಳ ಉತ್ಸಾಹದೊಂದಿಗೆ ವೀಕ್ಷಿಸುತ್ತಿದ್ದರು ಎನ್ನುವ ವಿಚಾರವನ್ನು ಬಹಿರಂಗಪಡಿಸಿದರು.

‘ಅವರು ಬಹಳ ಸೊಗಸಾಗಿ ಓಡಿದರು. ನಾವೆಲ್ಲರೂ ಅವರು ಒಲಿಂಪಿಕ್ಸ್ ಅರ್ಹತೆ ಗುರಿ ತಲುಪಲಿದ್ದಾರೆ ಎಂದುಕೊಂಡಿದ್ದೆವು’ ಎಂದು ಕಾರ್ತಿಕ್ ರಾಮನ್ ಹೇಳಿದರು. ‘ಆದರೂ, ಶ್ರೀನು ಅವರ ಪರಿಶ್ರಮ ಬಹಳ ಖುಷಿ ನೀಡಿತು. ಕೋವಿಡ್ ಸಂದರ್ಭದಲ್ಲೂ 1000 ಓಟಗಾರರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಪ್ರಶಂಸನೀಯ’ ಎಂದು ಕಾರ್ತಿಕ್ ರಾಮನ್ ಸಂತಸ ವ್ಯಕ್ತಪಡಿಸಿದರು.

ಪುರುಷರ ಎಲೈಟ್ ವಿಭಾಗದಲ್ಲಿ ಉತ್ತಾಖಂಡದ ನಿತೇಂದ್ರ ಸಿಂಗ್ ರಾವತ್ (2:18:54) ಹಾಗೂ ಆರ್ಮಿ ಕ್ರೀಡಾ ಸಂಸ್ಥೆಯ ರಾಶ್ಪಾಲ್ ಸಿಂಗ್ (2:18:57) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದರು. ಮಹಿಳೆಯರ ಎಲೈಟ್ ವಿಭಾಗದಲ್ಲಿ ಮಹಾರಾಷ್ಟ್ರದ ಜ್ಯೋತಿ ಗಾವಟೆ (2:58:23) ಹಾಗೂ ಲಡಾಖ್‍ನ ಜಿಗ್ಮೆತ್ ಡೋಲ್ಮಾ (3:04:52) ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು.

‘ಓಟದ ಉದ್ದಕ್ಕೂ ಎಲ್ಲೂ ಏನೂ ತೊಂದರೆ ಅನಿಸಲಿಲ್ಲ’ ಎಂದು ಶ್ರೀನು ಬುಗಥಾ ಓಟದ ಮುಗಿದ ಬಳಿಕ ಹೇಳಿದರು. ‘ಇಷ್ಟು ಹತ್ತಿರಕ್ಕೆ ಬಂದು ಅರ್ಹತಾ ಗುರಿಯನ್ನು ತಲುಪದೆ ಇರುವುದು ಬೇಸರ ಮೂಡಿಸಿತು. ಆದರೆ ನನ್ನ ಈ ಪ್ರಯತ್ನದಿಂದ ನಂಬಿಕೆ ಹೆಚ್ಚಾಗಿದೆ. ಸದ್ಯದಲ್ಲೇ ಒಲಿಂಪಿಕ್ಸ್‍ಗೆ ಅರ್ಹತೆ ಪಡೆಯಲಿದ್ದೇನೆ ಎನ್ನುವ ವಿಶ್ವಾಸವಿದೆ’ ಎಂದು ತಿಳಿಸಿದರು.

ಫಲಿತಾಂಶ
ಮ್ಯಾರಥಾನ್ (ಎಲೈಟ್ ವಿಭಾಗ)
ಪುರುಷ: 1.ಶ್ರೀನು ಬುಗಥಾ (2:14:59), 2.ನಿತೇಂದ್ರ ಸಿಂಗ್ ರಾವತ್ (2:18:54), 3.ರಾಶ್ಪಾಲ್ ಸಿಂಗ್ (2:18:57)
ಮಹಿಳೆ: 1.ಸುಧಾ ಸಿಂಗ್ (2:43:41), 2.ಜ್ಯೋತಿ ಗಾವಟೆ (2:58:23), ಜಿಗ್ಮೆತ್ ಡೋಲ್ಮಾ (3:04:53)

ಹಾಫ್ ಮ್ಯಾರಾಥಾನ್
ಪುರುಷ: 1. ಅಮರ್ ಸಿಂಗ್ ದೇವಾಂದ (1:13:58), 2.ಧನಂಜಯ ಶರ್ಮಾ (1:15:33), ಸಂಘ್ ಪ್ರಿಯಾ ಗೌತಮ್ (1:16:35)
ಮಹಿಳೆ: 1. ಜ್ಯೋತಿ ಚೌವ್ಹಾನ್ (1:20:57), 2.ಪೂಜಾ (1:28:39), 3. ತಾಶಿ ಲದೋಲ್ (1:30:13)

ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ನವದೆಹಲಿ ಮ್ಯಾರಾಥಾನ್ ಎಲೈಟ್ ಪುರುಷರ ವಿಭಾಗದಲ್ಲಿ ವಿಜೇತರ ಜೊತೆ ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು. ಪೋಡಿಯಂ ಮೇಲೆ ಶ್ರೀನು ಬುಗಥಾ (ಮಧ್ಯೆ), ನಿತೇಂದ್ರ ಸಿಂಗ್ ರಾವತ್ (ಎಡ) ಹಾಗೂ ರಾಶ್ಪಾಲ್ ಸಿಂಗ್(ಬಲ) ಇದ್ದಾರೆ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd