ದೇಶವನ್ನು ಸಾಲದಲ್ಲಿ ಮುಳುಗಿಸುತ್ತಿದ್ದಾರೆ : ಮೋದಿ ವಿರುದ್ಧ ಸಿದ್ದರಾಮಯ್ಯ ಗರಂ
ಬೆಂಗಳೂರು : ದೇಶವನ್ನು ಸಾಲದಲ್ಲಿ ಮುಳುಗಿಸುತ್ತಿದ್ದಾರೆ. 135.83 ಲಕ್ಷ ಕೋಟಿ ರೂ. ಸಾಲದ ಹೊರೆ ಇದೆ. ಇದರಲ್ಲಿ 83 ಕೋಟಿ ರೂ.ಸಾಲ ಮೋದಿ ಸರ್ಕಾರ ಮಾಡಿದ್ದು ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮೋದಿ 2014ರಲ್ಲಿ ಪ್ರಧಾನಿಯಾಗಿ ದೇಶವನ್ನು ಸ್ವರ್ಗ ಮಾಡುತ್ತೇನೆ ಅಂತ ಭ್ರಮೆ ಹುಟ್ಟಿಸಿದ್ರು.
ಅಚ್ಚೇ ದಿನ್ ಬರುತ್ತೆ ಅಂತ ಹೇಳಿ ಜನರಿಗೆ ಆಶಾ ಗೋಪುರ ಕಟ್ಟಿಸಿದ್ರು. ಅಧಿಕಾರಕ್ಕೆ ಬಂದು ಏಳು ವರ್ಷ ಕಳೆದಿದೆ. ಆದ್ರೆ ದೇಶ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಬೆರೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಮುಂದುವರೆದು ಬಿಜೆಪಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಬಿಜೆಪಿ ಅಧಿಕಾರಕ್ಕೆ ಬಂದ್ಮೇಲೆ ತೆರಿಗೆ ಜಾಸ್ತಿಯಾಗಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಹೆಚ್ಚಾಗಿದೆ. ಕಳೆದೊಂದು ವಾರದಲ್ಲಿ ಅಡುಗೆ ಅನಿಲ ಸಿಲಿಂಡರ್ ದರ 50 ರೂಪಾಯಿ ಜಾಸ್ತಿ ಮಾಡಿದ್ದಾರೆ ಎಂದು ಗರಂ ಆದರು.
ಜೊತೆಗೆ ಮೋದಿ ದೇಶವನ್ನು ಸಾಲದಲ್ಲಿ ಮುಳುಗಿಸುತ್ತಿದ್ದಾರೆ. 135.83 ಲಕ್ಷ ಕೋಟಿ ರೂ. ಸಾಲದ ಹೊರೆ ಇದೆ. ಇದರಲ್ಲಿ 83 ಕೋಟಿ ರೂ.ಸಾಲ ಮೋದಿ ಸರ್ಕಾರ ಮಾಡಿದ್ದು. ಆದರೂ 7 ಲಕ್ಷ ಕೋಟಿ ಮೊತ್ತದ ವಾಣಿಜ್ಯೋದ್ಯಮಿಗಳ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.