Siddaramaiah | ಅಕ್ರಮದ ಬಗ್ಗೆ ಪುರಾವೆಗಳಿದ್ದರೆ ಮೊದಲು ತನಿಖೆ ನಡೆಸಿ : ಸಿದ್ದರಾಮಯ್ಯ ಚಾಲೆಂಜ್
ಬೆಂಗಳೂರು : ನಮ್ಮ ಕಾಲದಲ್ಲಿ ಕೂಡಾ ಪೊಲೀಸ್ ನೇಮಕಾತಿಯಲ್ಲಿ ಹಗರಣಗಳಾಗಿವೆ ಎಂದು ಸುಳ್ಳು ಆರೋಪ ಮಾಡುವುದು ಸರಿ ಅಲ್ಲ. ನಾವು ಸಾವಿರಾರು ಪೊಲೀಸ್ ಸಿಬ್ಬಂದಿ ನೇಮಕ ಮಾಡಿದ್ದೇವೆ. ಅಕ್ರಮದ ಬಗ್ಗೆ ಪುರಾವೆಗಳಿದ್ದರೆ ಮೊದಲು ತನಿಖೆ ನಡೆಸಿ ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 1672 ಸಬ್ ಇನ್ಸ್‌ಪೆಕ್ಟರ್, 30,100 ಜನ ಕಾನ್ಸ್‌ಟೆಬಲ್ ಗಳು, 1102 ಜನ ಜೈಲ್ ವಾರ್ಡನ್‌ಗಳು, 33 ಜನ ಫೊರೆನ್ಸಿಕ್ ಇಲಾಖೆಗೆ ಸೇರಿದ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಆ ಬಗ್ಗೆ ಯಾವ ದೂರುಗಳು ಕೇಳಿಬಂದಿರಲಿಲ್ಲ.
ನಮ್ಮ ಸರ್ಕಾರದ ನೇಮಕಾತಿಯನ್ನು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಕೂಡಾ ಗಮನಿಸಿ ಕರ್ನಾಟಕದ ಮಾದರಿಯನ್ನು ಅನುಸರಿಸುವಂತೆ ಬೇರೆ ರಾಜ್ಯಗಳಿಗೆ ಸಲಹೆ ನೀಡಿದ್ದರು. ನೇಮಕಾತಿಯ ಉಸ್ತುವಾರಿ ಹೊತ್ತಿದ್ದ ಪೊಲೀಸ್ ಅಧಿಕಾರಿ ಔರಾದ್ ಕರ್ ಅವರು ಹಲವು ಪ್ರಶಸ್ತಿಗಳನ್ನು ಕೂಡಾ ಪಡೆದಿದ್ದಾರೆ.
ಪಿಎಸ್‌ಐ ನೇಮಕಾತಿ ಹಗರಣದ ಸೂತ್ರಧಾರಿ ದಿವ್ಯಾ ಹಾಗರಗಿ ಅವರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡಿದ್ದು ಯಾರು? ಅವರ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಶಿಫಾರಸು ಮಾಡಿದವರು ಯಾರು? ಅವರ ಜೊತೆ ಹಗರಣದಲ್ಲಿ ಷಾಮೀಲಾಗಿದ್ದವರು ಯಾರು ಬಿಜೆಪಿ ಎಂದು ಪ್ರಶ್ನಿಸಿದ್ದಾರೆ.
ಪಿಎಸ್‌ಐ ನೇಮಕಾತಿ ಹಗರಣ ಬಯಲಾದಾಗ ಗೃಹ ಸಚಿವರು ಅದನ್ನು ನಿರಾಕರಿಸಿದ್ದರು. ಅದರ ನಂತರ ಸಚಿವ ಪ್ರಭು ಚೌಹ್ಹಾಣ್ ಅಕ್ರಮದ ಬಗ್ಗೆ ಪತ್ರ ಬರೆದಿದ್ದರು. ಪತ್ರಿಕೆಗಳಲ್ಲಿ ಸರಣಿ ವರದಿಗಳು ಪ್ರಕಟವಾಗಿವೆ. ಇವೆಲ್ಲವನ್ನೂ ಗಮನಿಸಿದರೆ ಹಗರಣವನ್ನು ಮುಚ್ಚಿಹಾಕಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿರುವ ಅನುಮಾನ ಮೂಡುತ್ತದೆ ಎಂದು ಬರೆದುಕೊಂಡಿದ್ದಾರೆ.