ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ : ಸಿಎಂಗೆ ಸಿದ್ದರಾಮಯ್ಯ ಸವಾಲ್
ಹಾನಗಲ್ : ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಹಾನಗಲ್ ಕ್ಷೇತ್ರಕ್ಕೆ ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.
ಇಂದು ಸಿದ್ದರಾಮಯ್ಯ ಹಾನಗಲ್ ವಿಧಾನಸಭೆ ಕ್ಷೇತ್ರದ ನರೇಗಲ್ ಗ್ರಾಮದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಮತಯಾಚನೆ ಮಾಡಿದರು.
ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಡಾ. ಚಿತ್ತರಂಜನ್ ಕಲಕೋಟಿಯವರು ಅಧ್ಯಕ್ಷರಾಗಿದ್ದ ವೇಳೆ ರೂ. 6 ಕೋಟಿ ಲಾಭದಲ್ಲಿದ್ದ ಸಂಗೂರು ಸಕ್ಕರೆ ಕಾರ್ಖಾನೆ, ಉದಾಸಿ ಮತ್ತು ಶಿವರಾಜ್ ಸಜ್ಜನರ್ ಅವರು ಆಡಳಿತ ಮಂಡಳಿಯ ಅಧಿಕಾರ ವಹಿಸಿಕೊಂಡ ನಂತರ ನಷ್ಟದ ಹಾದಿಗೆ ಹೋಗಿದ್ದು ಏಕೆ?
ಸಂಗೂರು ಸಕ್ಕರೆ ಕಾರ್ಖಾನೆ ದಿವಾಳಿ ಸಂಬಂಧ 1959ರ ಸಹಕಾರಿ ಕಾಯ್ದೆಯಡಿ ತನಿಖೆ ನಡೆದು, ನೀವು ಲೂಟಿ ಮಾಡಿದ 33 ಲಕ್ಷ ಹಣವನ್ನು ಮರುಪಾವತಿ ಮಾಡಬೇಕು ಎಂದು ಆದೇಶ ನೀಡಿರುವುದನ್ನು ಮರೆತುಬಿಟ್ರಾ ಶಿವರಾಜ್ ಸಜ್ಜನರ್?
ಸಂಗೂರು ಸಕ್ಕರೆ ಕಾರ್ಖಾನೆ, ಗೌರಾಪುರ ಗುಡ್ಡದ 21 ಎಕರೆ ಭೂಮಿಯನ್ನು ನುಂಗಿ ನೀರುಕುಡಿದ ಶಿವರಾಜ್ ಸಜ್ಜನರ್ ಒಬ್ಬ ಸಜ್ಜನನೋ? ದುರ್ಜನನೋ? ಇಂಥವರು ಗೆದ್ದರೆ ಕ್ಷೇತ್ರದ ಅನುದಾನ ಸದ್ಬಳಕೆಯಾಗಲು ಸಾಧ್ಯವೇ? ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವೇ?
ಸಂಗೂರು ಸಕ್ಕರೆ ಕಾರ್ಖಾನೆಯ ಖಾಲಿ ಚೀಲಗಳನ್ನು ಬಿಡದೆ ಸಜ್ಜನರ್ ಲೂಟಿ ಮಾಡಿದ್ದಾರೆ. ಹಾಗಾಗಿ ಈ ಬಾರಿ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡದೆ, ಅವರ ಮತಗಳನ್ನು ಖಾಲಿ ಡಬ್ಬಗಳನ್ನಾಗಿ ಕಳುಹಿಸಿಕೊಡುವ ಮೂಲಕ ತಕ್ಕ ಪಾಠ ಕಲಿಸಬೇಕು.
ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಹಾನಗಲ್ ಕ್ಷೇತ್ರಕ್ಕೆ ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ. ನನ್ನ ಅಧಿಕಾರಾವಧಿಯಲ್ಲಿ ಎಷ್ಟು ಕೆಲಸ ಆಗಿದೆ ಎಂಬುದರ ಲೆಕ್ಕ ನಾನು ಕೊಡ್ತೀನಿ, ನಿಮ್ಮ ಸರ್ಕಾರ ಏನು ಮಾಡಿದೆ ಎಂಬುದರ ಲೆಕ್ಕ ನೀವು ಕೊಡಿ. ಜನರಿಗೆ ಸತ್ಯ ಗೊತ್ತಾಗಲಿ
ನನ್ನ ಅಧಿಕಾರಾವಧಿಯಲ್ಲಿ ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ರೂ. 2,400 ಕೋಟಿ ಅನುದಾನ ನೀಡಿದ್ದೆ.
2018 ರಲ್ಲಿ ಬಂದ ಪ್ರವಾಹದಿಂದಾಗಿ ಕಂಚಿನೆಗಳೂರು ಗ್ರಾಮದ ಒಡ್ಡು ಒಡೆದು ಕೆರೆಗೆ ಹೋಗಬೇಕಿದ್ದ ನೀರು ನದಿ ಸೇರುತ್ತಿದೆ. 3 ವರ್ಷ ಕಳೆದರೂ ಒಂದು ಒಡ್ಡು ಸರಿಪಡಿಸಲು ನಿಮ್ಮಿಂದ ಆಗಿಲ್ವಲ್ರೀ
ಬಸವರಾಜ ಬೊಮ್ಮಾಯಿ ಅವ್ರೆ.
ಕಳೆದ ಚುನಾವಣೆಯಲ್ಲಿ ಸೋತಿದ್ದರು ಕೂಡ ಕ್ಷೇತ್ರದಿಂದ ದೂರಾಗದೆ ಕೊರೊನಾ ಸಂದರ್ಭದಲ್ಲಿ ಜನರ ಜೊತೆಗಿದ್ದು, ಎಲ್ಲ ರೀತಿಯ ನೆರವು ನೀಡಿದ ನಮ್ಮ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.