ಬೈರತಿ ಬಸವರಾಜು ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ
ಬೆಂಗಳೂರು : ಭೂ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಬೈರತಿ ಬಸವರಾಜು ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಸರ್ಕಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ಡಿ.ವೈ.ಎಸ್.ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಾಗ ಪ್ರಕರಣದ ನೈತಿಕ ಹೊಣೆ ಹೊತ್ತು ಕೆ.ಜೆ.ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದರು. ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿ ತಿಂಗಳಾಗುತ್ತಾ ಬಂದರೂ ಬೈರತಿ ಬಸವರಾಜ್ ರಾಜೀನಾಮೆ ಪಡೆಯದ ಬಿಜೆಪಿ ಅವರಿಗೆ ಸರ್ಕಾರ ನಡೆಸಲು ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಇಂದು ಬೈರತಿ ಬಸವರಾಜ್ ಅವರ ಮೇಲಿನ ಭೂ ಹಗರಣದ ಆರೋಪದ ಬಗ್ಗೆ ಸದನದಲ್ಲಿ ಚರ್ಚೆ ನಡೆಸಿದರೆ ನ್ಯಾಯಾಲಯದ ವಿಚಾರಣೆಯ ಮೇಲೆ ಪ್ರಭಾವ ಬೀರುತ್ತದೆ, ಆದ್ದರಿಂದ ಸದನದ ನಿಯಾಮಾವಳಿಗಳಲ್ಲಿ ಚರ್ಚೆ ಅವಕಾಶವಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ಡಿ.ಕೆ ರವಿ ಮತ್ತು ಗಣಪತಿ ಅವರು ವೈಯಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಗ ಇದೇ ಜಗದೀಶ್ ಶೆಟ್ಟರ್, ಆರ್.ಅಶೋಕ್, ಬಸವರಾಜ ಬೊಮ್ಮಾಯಿ ಅವರು ನಿಯಮ 60 ರಡಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿರಲಿಲ್ಲವೇ?
ಈಗಿನಂತೆ ಹಿಂದೆಯೂ ಐ.ಪಿ.ಸಿ ಸೆಕ್ಷನ್ 200 ರಡಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿ ಪ್ರಕರಣ ನ್ಯಾಯಾಲಯದಲ್ಲಿತ್ತು, ಸದನದ ಅಂದಿನ ನಿಯಮಾವಳಿಗಳೇ ಇಂದೂ ಇವೆ, ಅಂದು ಹಠ ಹಿಡಿದು ಚರ್ಚೆ ನಡೆಸಿದಾಗ ನ್ಯಾಯಾಲಯದ ವಿಚಾರಣೆ ಮೇಲೆ ಪ್ರಭಾವ ಬೀರದ್ದು ಇಂದು ಮಾತ್ರ ಬೀರುತ್ತದೆಯೇ ಎಂದು ಗರಂ ಆಗಿದ್ದಾರೆ.
ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್ ಪುರಂ ಹೋಬಳಿಯ ಕಲ್ಕೆರೆಯಲ್ಲಿರುವ 22 ಎಕರೆ ಜಮೀನನ್ನು ಅಣ್ಣಯ್ಯಪ್ಪ ಎಂಬುವರಿಂದ 21/05/2003 ರಲ್ಲಿ ಖಾಲಿ ಛಾಪಾ ಕಾಗದಕ್ಕೆ ಸಹಿ ಹಾಕಿಸಿಕೊಂಡು ಕಾನೂನು ಬಾಹಿರವಾಗಿ ಬೈರತಿ ಬಸವರಾಜ್ ಅವರು ಖರೀದಿ ಮಾಡಿದ್ದಾರೆ ಎಂಬ ಆರೋಪವಿದೆ.
ದೂರುದಾರರಾದ ಮಾದಪ್ಪ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲು ಮಾಡಿದ ನಂತರ ಪೊಲೀಸರು ಬಿ ರಿಪೋರ್ಟ್ ಹಾಕಿದ್ದರು. ಇದನ್ನು ಪ್ರಶ್ನಿಸಿ ಮಾದಪ್ಪನವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯವು ಪೊಲೀಸರ ಬಿ ರಿಪೋರ್ಟ್ ಅನ್ನು ವಜಾಗೊಳಿಸಿ, ಸೆಕ್ಷನ್ 120(B), 420, 427, 465, 467, 471 ಗಳಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡು, ಸಮನ್ಸ್ ಜಾರಿಗೊಳಿಸುವಂತೆ ಆದೇಶಿಸಿದೆ. ಇವುಗಳಲ್ಲಿ ಕೆಲವು ಜಾಮೀನುರಹಿತ ಅಪರಾಧಗಳಾಗಿವೆ.
ಡಿ.ಕೆ ರವಿ ಹಾಗೂ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ನಮ್ಮ ಸರ್ಕಾರ ಸಿ.ಬಿ.ಐ ತನಿಖೆಗೆ ಒಪ್ಪಿಸಿತ್ತು. ಎರಡೂ ಪ್ರಕರಣದಲ್ಲಿ ಜಾರ್ಜ್ ಅವರು ನಿರಪರಾಧಿ ಎಂದು ವರದಿ ಬಂದಿದೆ. ಕೆಜೆ ಜಾರ್ಜ್ ಅವರಿಗೆ ನೈತಿಕತೆ ಆಧಾರದಲ್ಲಿ ರಾಜೀನಾಮೆಗೆ ಒತ್ತಾಯಿಸಿದ ಬಿಜೆಪಿ ಅವರಿಗೂ ನೈತಿಕತೆ ಇರಬೇಕಲ್ಲವೇ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ಡಿ.ಕೆ ರವಿ ಹಾಗೂ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ನಮ್ಮ ಸರ್ಕಾರ ಸಿ.ಬಿ.ಐ ತನಿಖೆಗೆ ಒಪ್ಪಿಸಿತ್ತು. ಎರಡೂ ಪ್ರಕರಣದಲ್ಲಿ ಜಾರ್ಜ್ ಅವರು ನಿರಪರಾಧಿ ಎಂದು ವರದಿ ಬಂದಿದೆ. @thekjgeorge ಅವರಿಗೆ ನೈತಿಕತೆ ಆಧಾರದಲ್ಲಿ ರಾಜೀನಾಮೆಗೆ ಒತ್ತಾಯಿಸಿದ @BJP4Karnataka ಅವರಿಗೂ ನೈತಿಕತೆ ಇರಬೇಕಲ್ಲವೇ? 9/11#ResignByrathiBasavaraj
— Siddaramaiah (@siddaramaiah) December 17, 2021
ಬಿಜೆಪಿಯವರಿಗೆ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆಯಿದ್ದರೆ, ರಾಜ್ಯದ ಜನರಿಗೆ ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡಬೇಕು ಎಂಬ ಆಶಯವಿದ್ದರೆ ತಕ್ಷಣ ಬೈರತಿ ಬಸವರಾಜ್ ಅವರ ರಾಜೀನಾಮೆ ಪಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ.
ಪ್ರಕರಣವು ತಾರ್ಕಿಕ ಅಂತ್ಯ ಕಾಣುವವರೆಗೆ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಮಯಾವಕಾಶದ ಕೊರತೆ ಇದೆ ಎನಿಸಿದರೆ ಬಿಜೆಪಿ ಸರ್ಕಾರ ಸದನವನ್ನು ಒಂದು ತಿಂಗಳವರೆಗೆ ಮುಂದುವರೆಸಲಿ, ನಾವು ಸದನಕ್ಕೆ ಹಾಜರಾಗಲು ಸಿದ್ಧರಿದ್ದೇವೆ. ಭೂ ಹಗರಣದ ಚರ್ಚೆಯಾಗಲೇಬೇಕು ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಖೇನ ಆಗ್ರಹಿಸಿದ್ದಾರೆ.