Congress | ಸಚಿವ ಗೋವಿಂದ ಕಾರಜೋಳ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

1 min read
Siddaramaiah Saaksha Tv

Congress | ಸಚಿವ ಗೋವಿಂದ ಕಾರಜೋಳ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು : ರಾಯಚೂರು ಜಿಲ್ಲೆಯ ಲಿಂಗಸೂಗೂರು ಹಾಗೂ ದೇವದುರ್ಗ ತಾಲೂಕುಗಳ ನಾರಾಯಣಪುರ ಬಲದಂಡೆ ನಾಲೆಯ ಕಾಮಗಾರಿಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಸದನ ಸಮಿತಿಯ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ಹೊಸ ಕಾಮಗಾರಿ ನಡೆಸದೆ ಹಳೆಯ ಕಾಮಗಾರಿಗಳನ್ನೇ ತೋರಿಸಿ ಸುಮಾರು 800 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆಸಲಾಗಿದೆ. ಹಾಗಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಈ ಹಗರಣದ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಸ್ಥಳ ಪರಿಶೀಲನೆಗೆ ತೆರಳಿದ್ದ ಅಂದಾಜು ಸಮಿತಿಯ ಸದಸ್ಯರನ್ನು ಕಾಮಗಾರಿ ಸ್ಥಳಕ್ಕೆ ತೆರಳಲು ಅವಕಾಶ ನೀಡದೆ ಅವರ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ ಗುತ್ತಿಗೆದಾರ ಹಾಗೂ ಆತನ ಬೆಂಬಲಿಗರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.

ನಾರಾಯಣಪುರ ಬಲದಂಡೆ ಕಾಲುವೆಯ 1 ರಿಂದ 15ರ ವರೆಗಿನ ವಿತರಣಾ ನಾಲೆಗಳ ಆಧುನೀಕರಣಕ್ಕಾಗಿ 828 ಕೋಟಿ ರೂಪಾಯಿ ಹಾಗೂ 16 ರಿಂದ 18 ವಿತರಣಾ ನಾಲೆಗಳ ಆಧುನೀಕರಣದ ಅಂದಾಜು ವೆಚ್ಚ 791 ಕೋಟಿ ರೂಪಾಯಿ ಸೇರಿದಂತೆ ಒಟ್ಟು 1,619 ಕೋಟಿ ರೂಪಾಯಿ ಟೆಂಡರ್‌ ಕರೆಯಲಾಗಿದೆ.

ಈ ಎರಡೂ ಕಾಮಗಾರಿಗಳ ಟೆಂಡರ್‌ ಪಡೆದವರು ಎನ್.ಡಿ ವಡ್ಡರ್. ಇವರು ಲಿಂಗಸೂಗೂರಿನ ಮಾಜಿ ಶಾಸಕರಾದ ಮಾನಪ್ಪ ವಜ್ಜಲ್ ಅವರ ಸಹೋದರ. ತಮ್ಮ ಸಹೋದರನ ಹೆಸರಿನಲ್ಲಿ ಮಾಜಿ ಶಾಸಕರೇ ಕಾಮಗಾರಿ ನಡೆಸುತ್ತಿದ್ದಾರೆ ಎಂಬ ವರದಿ ಪ್ರಸಾರವಾಗಿದೆ.

ಈ ಹಿಂದೆ ತುಂಬಿಸಲಾಗಿರುವ ಮಣ್ಣನ್ನೇ ತೋರಿಸಿ, ಕಾಮಗಾರಿ ನಡೆಸಲಾಗಿದೆ ಎಂದು ಈ ವರೆಗೆ 425 ಕೋಟಿ ರೂಪಾಯಿ ಬಿಲ್ ಪಡೆಯಲಾಗಿದ್ದು, ಅರಣ್ಯ ತೆರವು, ಮುರಮ್ ಹಾಕುವುದು ಹೀಗೆ ಇನ್ನೂ ಹಲವು ವಿಧದಲ್ಲಿ ಸುಳ್ಳು ಲೆಕ್ಕ ನೀಡಿ ಸುಮಾರು 800 ಕೋಟಿ ರೂಪಾಯಿ ಲೂಟಿ ಹೊಡೆಯಲಾಗಿದೆ.

ಮುಖ್ಯಮಂತ್ರಿಗಳ ಆದೇಶದ ಮೇರೆಗೆ ರಚನೆಯಾದ ಸಮಿತಿ, ಈ ಮೊದಲೇ ಮಣ್ಣು ತುಂಬಿಸುವ ಕಾರ್ಯ ಮಾಡಿ ಮುಗಿಸಿರುವುದರಿಂದ ಈಗ ಮತ್ತೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಣ್ಣು ತುಂಬಿಸುವ ಅಗತ್ಯವೇನಿದೆ? ಇಲ್ಲಿ ತೋರಿಸುತ್ತಿರುವ ಲೆಕ್ಕ ಸುಳ್ಳಿನಿಂದ ಕೂಡಿದೆ ಎಂಬ ವರದಿ ನೀಡಿದೆ.

ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತಿದ್ದು ಜನರ ತೆರಿಗೆ ಹಣದ ದುರ್ಬಳಕೆಗೆ ಅವಕಾಶ ನೀಡದೆ, ರಾಜ್ಯ ಬಿಜೆಪಿ ಸರ್ಕಾರ ಈ ಕೂಡಲೇ ಬಿಡುಗಡೆಯಾದ ಬಿಲ್ ಹಣವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಬೇಕು ಜೊತೆಗೆ ಬಾಕಿ ಬಿಲ್ ಅನ್ನು ತಡೆಹಿಡಿಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. Siddaramaiah demands resignation of Minister Govinda Karajola

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd