ಬೆಂಗಳೂರು : ದೇಶವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ತಡೆಗಟ್ಟಲು ಸರ್ಕಾರ ಅನೇಕ ಕ್ರಮ ಕೈಗೊಂಡಿದೆ ಅಂತ ಪ್ರಧಾನಮಂತ್ರಿ ಮೇಲಿಂದ ಮೇಲೆ ಭಾಷಣ ಮಾಡಿದರು. ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿದರು. ಆದರೆ ನನ್ನ ಪ್ರಕಾರ ಲಾಕ್ ಡೌನ್ ಮುನ್ನ ಮುನ್ನೆಚ್ಚರಿಕೆ ಕೈಗೊಳ್ಳಬೇಕಿತ್ತು. ಅಂತರರಾಷ್ಟ್ರೀಯ ವಿಮಾನಗಳಿಗೆ ಫೆಬ್ರವರಿಯಲ್ಲಿ ನಿರ್ಬಂಧ ಹೇರಬೇಕಿತ್ತು ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ವಿರೋಧ ಪಕ್ಷಗಳು, ರೈತ ಮುಖಂಡರು, ಕಾರ್ಮಿಕರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ತಬ್ಲಿಘಿಗಳ ಸಮಾವೇಶಕ್ಕೆ ಅವಕಾಶ ಕೊಟ್ಟಿದ್ದು ಯಾರು? ಅದು ಭಾರತ ಸರ್ಕಾರ. ಸಮಸ್ಯೆ ಕಂಡುಬಂದಾಗಲೂ ಸಭೆಯನ್ನು ತಡೆಗಟ್ಟಲು ವಿಫಲವಾಗಿದ್ದು ಇವರೇ ಎಂದು ದೂರಿದರು. ಇನ್ನು ಇದೇ ವೇಳೆ ನಮಸ್ತೆ ಟ್ರಂಪ್ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ಫೆಬ್ರವರಿಯಲ್ಲಿ ದೇಶದಲ್ಲಿ ಸೋಂಕು ಕಾಣಿಸಿಕೊಂಡಾಗ ಅಮೆರಿಕ ಅಧ್ಯಕ್ಷರನ್ನು ಕರೆಯಿಸಿದ್ರಿ. ಗುಜರಾತ್ ನಲ್ಲಿ ಮೆರವಣಿಗೆ ಮಾಡಿಸಿದ್ರಿ, ಅದು ತಪ್ಪು ಎಂದರು.
ಇನ್ನು ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ, ನಾಲ್ಕೈದು ಬಾರಿ ಪ್ರಧಾನಮಂತ್ರಿಗಳು ಭಾಷಣ ಮಾಡಿ ಮಾಸ್ಕ್ ಹಾಕ್ಕೊಳ್ಳಿ, ಸ್ಯಾನಿಟೈಸರ್ ಹಾಕ್ಕೊಳಿ ಅಂದ್ರು. ಆದರೆ ಲಾಕ್ ಡೌನ್ ನಿಂದ ಅಸಂಘಟಿತ ಕಾರ್ಮಿಕರ ಸಮಸ್ಯೆ, ರೈತರು, ಕಾರ್ಮಿಕರ ಬಗ್ಗೆ ಏನು ಹೇಳಲಿಲ್ಲ ಎಂದರು.
ಸಿಎಂ ರಿಲೀಫ್ ಫಂಡ್ ಮಾಹಿತಿ ಇಲ್ಲ. ಎಷ್ಟು ಬಂತು, ಯಾರಿಗೆ ಕೊಟ್ರು ಅನ್ನೋ ಮಾಹಿತಿ ಇಲ್ಲ. ಪಿಎಂ ಕೇರ್ ಫಂಡ್ ಗೆ ರಾಜ್ಯದಿಂದ 1500 ಕೋಟಿ ಹಣ ಕೊಟ್ಟಿದ್ದಾರೆ. ಆದ್ರೆ ಕೇಂದ್ರ ಸರ್ಕಾರ ಏಕೆ ಸಹಾಯ ಘೋಷಣೆ ಮಾಡಿಲ್ಲ. ಪಿಎಂ ಕೇರ್ ಫಂಡ್ ನಮಗೆ ಯಾಕೆ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಹೆಚ್.ಡಿ. ರೇವಣ್ಣ ಪತ್ರ ಬರೆದು ಕೊರೊನಾ ಸಿಎಂ ರಿಲೀಫ್ ಫಂಡ್ ಬಗ್ಗೆ ಮಾಹಿತಿ ಕೇಳಿದರೂ ಉತ್ತರ ನೀಡಿಲ್ಲ. ನಾವು ಕೊಟ್ಟ ಸಲಹೆ ಸೂಚನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ನಿಸ್ಸಾಹಾಯಕ ವರ್ಗಕ್ಕೆ ಪರಿಹಾರ ಕೊಟ್ಟಿಲ್ಲ. ಅದಕ್ಕೆ ನಾವು ಚಾರ್ಟ್ ಆಫ್ ಡಿಮಾಂಡ್ಸ್ ಇಡ್ತೀವಿ. ಅದನ್ನು ಸರ್ಕಾರ ನಿಗದಿತ ವೇಳೆಯೊಳಗೆ ಕಾರ್ಯಗತಗೊಳಿಸಬೇಕು. ಇಲ್ಲದೆ ಇದ್ದರೆ ವಿರೋಧ ಪಕ್ಷವಾಗಿ ರಾಜ್ಯದ ಹಿತದೃಷ್ಟಿಯಿಂದ ಅನಿವಾರ್ಯವಾಗಿ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇನ್ನೂ ಮೂರು ದಿನಗಳಲ್ಲಿ ಚಾರ್ಟ್ ಆಫ್ ಡಿಮಾಂಡ್ ಸಿದ್ಧಗೊಳಿಸಿ ಮುಖ್ಯಮಂತ್ರಿಗಳಿಗೆ ಕೊಟ್ಟು ಚರ್ಚೆ ಮಾಡ್ತೀವಿ. ಇದು ಎಲ್ಲರ ಒಮ್ಮತದ ಅಭಿಪ್ರಾಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.