ಬೆಂಗಳೂರು : ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ರೈತ ಮುಖಂಡರ ಜೊತೆ ಸಭೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಈ ಕುರಿತು ರೈತ ಮುಖಂಡರ ಜೊತೆ ಮಾತುಕತೆ ನಡೆಸಿ ಅಭಿಪ್ರಾಯ ಪಡೆದಿದ್ದೇನೆ. ಎಲ್ಲರೂ ಕಾಯ್ದೆ ವಿರೋಧಿಸಿದ್ದಾರೆ. ಇದು ರೈತರನ್ನು ಬೀದಿ ಪಾಲು ಮಾಡುವ ಕಾಯ್ದೆಯಾಗಿದೆ. ಗ್ರಾಮೀಣ ಪ್ರದೇಶದ ಆರ್ಥಿಕತೆ ಬುಡಮೇಲು ಮಾಡುತ್ತದೆ. ಆಹಾರ ಸ್ವಾವಲಂಬನೆಗೆ ಏಟು ನೀಡುತ್ತದೆ. ಹಳ್ಳಿ ಮಟ್ಟದಲ್ಲಿ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ನಾವು ಕೂಡ ಪಕ್ಷದ ವತಿಯಿಂದ ಹೋರಾಟ ಮಾಡ್ತೇವೆ. ಪಕ್ಷದ ಇತರೆ ಹಿರಿಯ ನಾಯಕರ ಜೊತೆ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ವಿದ್ಯುತ್ ಕಾಯ್ದೆಗೂ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಸರ್ಕಾರ ರೈತರಿಗೆ ಮಾರಕವಾದ ತಿದ್ದುಪಡಿ ಮಾಡುತ್ತಿದೆ. ತಿದ್ದುಪಡಿ ಕಾಯ್ದೆ ಜಾರಿಯಿಂದ ಒಟ್ಟು 1.70 ಲಕ್ಷ ಎಕರೆ ಪ್ರದೇಶ 13 ಸಾವಿರ ಭೂ ವ್ಯಾಜ್ಯಗಳು ರದ್ದಾಗಲಿವೆ. ಈ ಎಲ್ಲಾ ಭೂಮಿ ಸರ್ಕಾರಕ್ಕೆ ಬರಲಿವೆ. ಸರ್ಕಾರ ಭೂಮಿಯನ್ನು ಮುಟ್ಟುಗೋಲು ಹಾಕಿ ಶ್ರೀಮಂತರು, ರಿಯಲ್ ಎಸ್ಟೇಟ್ನವರಿಗೆ ಮಾರುವುದು ಇದರ ಹಿಂದಿರುವ ಹುನ್ನಾರ. ರಿಯಲ್ ಎಸ್ಟೇಟ್ನವರ ಒತ್ತಡಕ್ಕೆ ಮಣಿದು ಸರ್ಕಾರ ಈ ರೀತಿ ಮಾಡುತ್ತಿದೆ. ಈ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.








