ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾಷಣವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಜೊತೆಗೆ ಮೋದಿ ಅವರು ಭಾಷಣದಲ್ಲಿ ಸತ್ವ ಇಲ್ಲ ಎನ್ನುವ ಮೂಲಕ ವ್ಯಂಗ್ಯ ಮಾಡಿದ್ದಾರೆ. ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೋದಿ ಅವರ ಭಾಷಣದಲ್ಲಿ ಕೊರೊನಾ ತಡೆಗೆ ಯಾವುದೇ ಮುಂಜಾಗ್ರತಾ ಕ್ರಮ ಹೇಳಿಲ್ಲ. ಕೇಂದ್ರದಿಂದ ಕೈಗೊಳ್ಳುವ ತುರ್ತು ಕ್ರಮಗಳನ್ನು ಹೇಳಿಲ್ಲ. ರಾಜ್ಯ ಸರ್ಕಾರಗಳಿಗೆ ಹಣ ಕೊಡುತ್ತೇವೆ ಎಂದು ಹೇಳಿಲ್ಲ. ಅಮೆರಿಕ ಅಧ್ಯಕ್ಷರು ಅವರ ದೇಶಕ್ಕೆ 50 ಮಿಲಿಯನ್ ಡಾಲರ್ ಕೊಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಮೋದಿ ಅವರು ತಮ್ಮ ಭಾಷಣದಲ್ಲಿ ಹಣ ಕೊಡುತ್ತೇವೆ ಎಂದು ಹೇಳಿಲ್ಲ. ಅವರ ಭಾಷಣ ಪೂರ್ತಿ ಜನ ಮನೆಯಿಂದ ಹೊರಬರಬೇಡಿ, ಮನೆಯಲ್ಲೇ ಇರಿ ಎನ್ನುವಂತೆ ಇತ್ತು. ಈ ವಿಚಾರ ಜನರಿಗೆ ಗೊತ್ತಿದೆ. ಹಾಗಾಗಿ ಜನ ಹೊರ ಬರುತ್ತಿಲ್ಲ. ಕೇಂದ್ರ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂದು ಹೇಳಬೇಕಿತ್ತು ಎಂದು ಮೋದಿ ವಿರುದ್ದ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸದ್ಯ ಜನತಾ ಕರ್ಫ್ಯೂ ಅಂದರೇನು ?
ಈಗಾಗಲೇ ಜನ ಮನೇಲೇ ಇದ್ದಾರೆ. ಈ ಥರ ಕರ್ಫ್ಯೂ ಅನ್ನು ಈಗಾಗಲೇ ರಾಜ್ಯದಲ್ಲಿ ಜಾರಿ ಇದೆ. ಇದನ್ನೇ ಮೋದಿಯವರು ವಿಶೇಷವಾಗಿ ಹೇಳೋದೇನು ? ಎಂದು ಸಿದ್ದರಾಮಯ್ಯ ಅವರು ಮೋದಿ ಭಾಷಣಕ್ಕೆ ವ್ಯಂಗ್ಯ ಮಾಡಿದ್ದಾರೆ.








