ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 15ನೇ ಬಜೆಟ್ ಮಂಡಿಸುತ್ತಿದ್ದು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತೆರಿಗೆ ಹಂಚಿಕೆಯಲ್ಲಿ ರಾಜ್ಯ ಸರ್ಕಾರಕ್ಕೆ ಅನ್ಯಾಯವಾಗಿದೆ ಎಂದು ತಮ್ಮ ಬಜೆಟ್ ಭಾಷಣದಲ್ಲಿ ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಎಂ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಪ್ರಸಕ್ತ 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗಿದೆ. 14ನೇ ಹಣಕಾಸು ಆಯೋಗದ ಶಿಫಾರಸುಗಳು ಜಾರಿಯಲ್ಲಿದ್ದಿದ್ದರೆ ರಾಜ್ಯಕ್ಕೆ ಹೆಚ್ಚು ಪಾಲು ಸಿಗುತ್ತಿತ್ತು ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಸಾಕಷ್ಟು ಅನುದಾನಗಳು ಸಿಕ್ಕಿದ್ದವು. ರಾಜ್ಯದ ಅಭಿವೃದ್ಧಿಗೆ ಅನುಕೂಲವಾಗಿತ್ತು. ಆದರೆ, ಕಲೆದ 10 ವರ್ಷಗಳಿಂದ ಎನ್ ಡಿಎ ಸರ್ಕಾರದಿಂದ ಜನವಿರೋಧಿ ಆಡಳಿತ ಇದೆ. ಸಂಪನ್ಮೂಲ ಶೇಖರಣೆ ಕೆಲವೆಡೆ ಮಾತ್ರ ಕೇಂದ್ರೀಕೃತವಾಗಿದೆ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿರುವುದನ್ನು ಸ್ವಾಗತಿಸಿದ ಸಿಎಂ, ಆಯೋಗ ಶಿಫಾರಸು ಮಾಡಿದಂತೆ ವ್ಯವಸಾಯ ವೆಚ್ಚದ ಜೊತೆಗೆ ಶೇ. 50ರಷ್ಟು ಲಾಭವನ್ನು ನೀಡುವ ಎಂಎಸ್ಪಿ ನೀತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.