ಕರ್ನಾಟಕ ರಾಜಕೀಯದಲ್ಲಿ ಮತ್ತೆ ಸಿಎಂ ಕುರ್ಚಿಯ ಗೇಮ್ ಆಫ್ ಥ್ರೋನ್ಸ್ ಚರ್ಚೆಗೆ ಗ್ರಾಸವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಟೀಮ್ ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿದ್ದ ಸಮಯದಲ್ಲಿ, ಸಿಎಂ ಸಿದ್ದರಾಮಯ್ಯ ಅವರ ಸ್ಪಷ್ಟ ಹೇಳಿಕೆ ಡಿಕೆಶಿಗೆ ಬಿರುಗಾಳಿ ಬೀಸಿದಂತಾಗಿದೆ.
ಸಿದ್ದರಾಮಯ್ಯ ಅವರು ಬಹಿರಂಗವಾಗಿ ನಾನು 5 ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆ ನಿರ್ವಹಿಸುತ್ತೇನೆ ಎಂದು ಘೋಷಣೆ ಮಾಡಿದ ನಂತರ, ಡಿಕೆಶಿ ಬೆಂಬಲಿಗರ ಲೆಕ್ಕಾಚಾರ ತಲೆಕೆಳಗಾಗಿದೆ. ಈ ಹೇಳಿಕೆಯಿಂದ ಡಿಕೆಶಿಯ ಮುಖ್ಯಮಂತ್ರಿಯಾಗುವ ಕನಸು ನುಚ್ಚು ನೂರಾಗಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.
ಇತ್ತೀಚೆಗೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ಡಿಕೆಶಿ ದೇವಿ ಪ್ರಾರ್ಥನೆ ಮಾಡಿದ್ದರೂ, ಅದರ ಫಲ ಸದ್ಯಕ್ಕಂತು ಕಾಣುವ ಲಕ್ಷಣವಿಲ್ಲ. ಈಗಾಗಲೇ ತಮ್ಮ ಬೆಂಬಲಿಗರ ಶಕ್ತಿಯನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಡಿಕೆಶಿ ಶ್ರಮಿಸುತ್ತಿದ್ದು, ಮುಂದೆ ತಮ್ಮ ಲಾಬಿಯನ್ನು ಮತ್ತಷ್ಟು ಬಲಪಡಿಸಲು ಸಾಧ್ಯತೆ ಇದೆ.
ಮತ್ತೊಂದೆಡೆ, ಕಾಂಗ್ರೆಸ್ ಹೈಕಮಾಂಡ್‌ವೂ ಡಿಕೆಶಿಗೆ ಸ್ಪಷ್ಟ ಸಂದೇಶ ನೀಡುವ ಸಾಧ್ಯತೆ ಇದೆ ಎಂಬ ಮಾತು ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿದೆ. ರಾಹುಲ್ ಗಾಂಧಿಯು ಡಿಕೆಶಿಗೆ ಈ ಅವಧಿಯಲ್ಲಿ ನಾಯಕತ್ವ ಬದಲಾವಣೆ ಸಾಧ್ಯವಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ಅಥವಾ ನೇರವಾಗಿ ನೀಡಬಹುದು ಎಂಬ ಮಾತುಗಳು ಕಾಂಗ್ರೆಸ್ ಪಕ್ಷದೊಳಗೆ ಕೇಳಿಬರುತ್ತಿವೆ.








