ಸಬ್ ಕಾ ವಿಕಾಸ್ ಆಗಿಲ್ಲ, ಕಾರ್ಪೋರೇಟ್ ಕಂಪನಿಗಳ ವಿಕಾಸ್ ಆಗಿದೆ : ಸಿದ್ದರಾಮಯ್ಯ
ಬೆಂಗಳೂರು : ದೇಶ ಕಳೆದ ಏಳು ವರ್ಷ ಅಭಿವೃದ್ಧಿಯಲ್ಲಿ ಮುಂದೆ ಹೋಗುವ ಬದಲು ಹಿಂದಕ್ಕೆ ಹೋಗಿದೆ. ಸಬ್ ಕಾ ವಿಕಾಸ್ ಆಗಿಲ್ಲ. ಬಡ ಸಾಮಾನ್ಯ ವರ್ಗದ ಜನರ ವಿಕಾಸ ಆಗಿಲ್ಲ. ಇವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಇದನ್ನು ನಾನಲ್ಲ, ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಅಂಬಾನಿ ಅದಾನಿ ಹಾಗೂ ಕೆಲ ಕಾರ್ಪರೇಟ್ ಕಂಪನಿಗಳ ವಿಕಾಸ ಆಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಏಳು ವರ್ಷದ ಸಾಧನೆಯನ್ನು ಬಿಜೆಪಿ ನಾಯಕರು ಖಾಲಿ ಕೊಡ ಹಿಡಿದು ಆಚರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕೆಳಮುಖವಾಗಿ ಸಾಗುತ್ತಿದೆ. ಆದರೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಇವರು ಸಾಧಕರು ಎಂದು ಕೊಂಡಾಡುತ್ತಿದ್ದಾರೆ. ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಗೆ ನೊಂದವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಶಾಪ ಹಾಕುತ್ತಿದ್ದಾರೆ ಎಂದು ಜರಿದರು.
ಇನ್ನು ಇವರು ಅಧಿಕಾರಕ್ಕೆ ಬಂದ ನಂತರ ಹಲವು ಕಾರ್ಖಾನೆಗಳನ್ನು ಮುಚ್ಚಿಸಿದ್ದಾರೆ. 70 ಕ್ಕೂಹೆಚ್ಚು ಸಾರ್ವಜನಿಕ ವಲಯದ ಕಾರ್ಖಾನೆ ಹಾಗೂ ಸಂಸ್ಥೆಗಳನ್ನು ಮುಚ್ಚಿಸಿದ್ದಾರೆ. ದೇಶ ಕಳೆದ ಏಳು ವರ್ಷ ಅಭಿವೃದ್ಧಿಯಲ್ಲಿ ಮುಂದೆ ಹೋಗುವ ಬದಲು ಹಿಂದಕ್ಕೆ ಹೋಗಿದೆ. ನಿರುದ್ಯೋಗ ಸಮಸ್ಯೆ, ಸಾಲ ಹೆಚ್ವಳ, ಜಿಡಿಪಿ ಕುಸಿತ ಎಲ್ಲವೂ ಹಿನ್ನಡೆ ತೋರಿಸುತ್ತಿದೆ. ದೇಶದಲ್ಲಿ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. 43 ಕೋಟಿ ಮಂದಿ ಬಡತನ ರೇಖೆ ವ್ಯಾಪ್ತಿಗೆ ಬಂದಿದ್ದಾರೆ. ಇದು ಯಾರ ವಿಕಾಸ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮುಂದುವರೆದು ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ವಿಫಲವಾಗಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ದೇಶದ ಜನ ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ಆಮ್ಲಜನಕ ವೆಂಟಿಲೇಟರ್ ಲಸಿಕೆ ಸಿಗದೇ ತೊಂದರೆಗೆ ಒಳಗಾಗಿದ್ದಾರೆ. ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಎರಡನೇ ಅಲೆ ಬರುತ್ತದೆ ಎಂಬ ಮುನ್ನೆಚ್ಚರಿಕೆ ಇದ್ದರೂ ಅದಕ್ಕೆ ಸಜ್ಜಾಗುವ ಕೇಂದ್ರ ಸರ್ಕಾರ ವಿಫಲವಾಗಿದೆ. ರಾಜ್ಯ ಸರ್ಕಾರಗಳಿಗೆ ಯಾವುದೇ ಸಹಕಾರ ನೀಡಿಲ್ಲ. ಹೀಗಾಗಿ ಎರಡನೇ ಅಲೆ ಎದುರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ವಿಫಲವಾಗಿದ್ದಾರೆ. ಈ ಮಹಾಮಾರಿಯನ್ನು ಲಕ್ಷಾಂತರ ಮಂದಿ ಸತ್ತಿದ್ದಾರೆ ಅದಕ್ಕೆ ಮೋದಿ ಸರ್ಕಾರವೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.