==ಗೋಹತ್ಯೆ ನಿಷೇಧ ಮಸೂದೆಗೆ ಪಾಸ್‌ಗೆ ಬಿಜೆಪಿ ಸರ್ಕಸ್==
ಬೆಂಗಳೂರು: ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗೆ ಅನುಮೋದನೆ ಪಡೆಯಲು ರಾಜ್ಯ ಬಿಜೆಪಿ ಸರ್ಕಾರ ಸಭಾಪತಿಗಳ ವಿರುದ್ಧದ ಅವಿಶ್ವಾನ ನಿರ್ಣಯವನ್ನು ಮುಂದಿಟ್ಟುಕೊಂಡು ಒಂದು ದಿನದ ವಿಧಾನಪರಿಷತ್‍ನ ವಿಶೇಷ ಅಧಿವೇಶನ ಕರೆಯಲು ಮುಂದಾಗಿದೆ.
ಈ ಸಂಬಂಧ ರಾಜ್ಯಪಾಲ ವಜುಬಾಯ್ ವಾಲಾರನ್ನು ಭೇಟಿ ಮಾಡಿದ್ದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪರಿಷತ್ ವಿಶೇಷ ಅಧಿವೇಶನ ಕರೆಯಲು ಸಭಾಪತಿಗಳಿಗೆ ಸೂಚಿಸುವಂತೆ ಮನವಿ ಮಾಡಿದ್ದರು.
ಇದರ ಬೆನ್ನಲ್ಲೇ ವಿಧಾನಪರಿಷತ್ ಕಲಾಪವನ್ನ ಮುಂದುವರಿಸುವಂತೆ ಅಥವಾ ಒಂದು ವಿಶೇಷ ಅಧಿವೇಶನ ನಡೆಸುವಂತೆ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಗಳು ವಿಧಾನಪರಿಷತ್ ಕಾರ್ಯದರ್ಶಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಡಿಸೆಂಬರ್15 ರಂದು ಮಂಗಳವಾರ ಬೆಳಿಗ್ಗೆ 11ಕ್ಕೆ ವಿಧಾನಪರಿಷತ್ ಅಧಿವೇಶನ ಕರೆಯಬೇಕು. ನಿಯಾಮವಳಿಗಳಂತೆ ಅವಿಶ್ವಾಸ ನಿರ್ಣಯ ಕುರಿತು ಚರ್ಚಿಸಲು ಅನುವು ಮಾಡಿಕೊಡಬೇಕೆಂದು ನಿರ್ದೇಶನ ನೀಡುವಂತೆ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಪತ್ರದಲ್ಲಿ ಸೂಚನೆ ನೀಡಿದ್ದಾರೆ.
ಸರ್ಕಾರ ನಿಗದಿ ಮಾಡಿದ ಕಾರ್ಯಕಲಾಪಗಳ ಪಟ್ಟಿಯಂತೆ ಡಿಸೆಂಬರ್ 15ರವರೆಗೆ ಪರಿಷತ್ ಕಲಾಪ ನಡೆಯಬೇಕಿತ್ತು. ಆದರೆ ವಿಧಾನಪರಿಷತ್‍ನ ಕಲಾಪ ಸಲಹಾ ಸಮಿತಿಯಲ್ಲಿ ಯಾವುದೇ ತೀರ್ಮಾನವಾಗದೇ ಇದ್ದರೂ ಸಭಾಪತಿಗಳು ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿವೇಶನವನ್ನು ಈ ಹಿಂದೆ ನಿಗದಿ ಮಾಡಿದಂತೆ ಡಿ.15ರವರೆಗೆ ಮುಂದುವರೆಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಸದಸ್ಯರು ದೂರು ಹೋಗಿದ್ದಲ್ಲಿ ಕಡೆಯ ಪಕ್ಷ ಡಿ.15ರಂದು ಬೆಳಿಗ್ಗೆ 11ಗಂಟೆಗೆ ಸಭೆ ಕರೆದು ನಿಯಮಾವಳಿಗಳಂತೆ ಸಭಾಪತಿ ವಿರುದ್ಧ ನೀಡಲಾದ ಅವಿಶ್ವಾಸ ನಿರ್ಣಯದ ಸೂಚನೆ ಚರ್ಚಿಸಲು ಅನುವು ಮಾಡಿಕೊಡಲು ಹಾಗೂ ಇತರೆ ಸರ್ಕಾರಿ ಕಾರ್ಯಕಲಾಪ ನಡೆಯಬೇಕಾಗಿರುವುದರಿಂದ ಮಂಗಳವಾರ ವಿಶೇಷ ಅಧಿವೇಶನ ಕರೆಯುವಂತೆ ಪತ್ರದಲ್ಲಿ ಪರಿಷತ್ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಸರ್ಕಾರದ ನಡೆ ಹಿಂದಿದೆ ಗೋಹತ್ಯೆ ನಿಷೇಧ ಕಾಯ್ದೆ..?
ಗ್ರಾಮ ಪಂಚಾಯಿತಿಗಳ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಗುರುವಾರ ವಿಧಾನಮಂಡಲ ಅಧಿವೇಶನವನ್ನು ನಾಲ್ಕೇ ದಿನಕ್ಕೆ ಮೊಟಕುಗೊಳಿಸಲಾಗಿದೆ. ಹೀಗಾಗಿ ಬಿಜೆಪಿಯ ಮಹತ್ವಾಕಾಂಕ್ಷೆಯ ಗೋಹತ್ಯೆ ನಿಷೇಧ ಮಸೂದೆ ವಿಧಾನ ಪರಿಷತ್‍ನಲ್ಲಿ ಮಂಡಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಲೇ ಇಲ್ಲ. ವಿಧಾನಸಭೆಯ ಅನುಮೋದನೆ ಪಡೆಯುವ ಹೊತ್ತಿಗಾಗಲೇ ವಿಧಾನ ಪರಿಷತ್ ಕಲಾಪವನ್ನು ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅನಿರ್ಧಿಷ್ಟಾವಧಿಗೆ ಮುಂದೂಡಿದ್ದರು.
ಈ ಹಿನ್ನೆಲೆಯಲ್ಲಿ ಗೋಹತ್ಯೆ ಮಸೂದೆ ಅಸೆಂಬ್ಲಿಯಲ್ಲಿ ಪಾಸ್ ಆಗಿದ್ದರೂ ಮಸೂದೆ ಸ್ವರೂಪ ಸಿಕ್ಕಿಲ್ಲ. ಹೀಗಾಗಿ ಮತ್ತೊಮ್ಮೆ ವಿಧಾನಪರಿಷತ್‍ನ ಅಧಿವೇಶನ ಕರೆದು ಗೋಹತ್ಯೆ ಮಸೂದೆಗೆ ಅಂಕಿತ ಪಡೆಯುವುದು ಬಿಜೆಪಿ ಸರ್ಕಾರದ ಪ್ಲಾನ್ ಎನ್ನಲಾಗಿದೆ.
ವಿಶೇಷ ಅಧಿವೇಶನಕ್ಕೆ ಬಿಜೆಪಿಗೆ ನೆಪ ಸಿಕ್ಕಿರುವುದು ವಿಧಾನಪರಿಷತ್ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ನಿರ್ಣಯ. ಅಧಿವೇಶನ ಆರಂಭಕ್ಕೂ ಮೊದಲೇ ಬಿಜೆಪಿ, ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಪ್ರತಾಪ್ ಚಂದ್ರಶೆಟ್ಟಿ ಕಾಂಗ್ರೆಸ್‍ನವರಾದ ಕಾರಣ ಅವರನ್ನು ಅವಿಶ್ವಾಸ ನಿರ್ಣಯದ ಮೂಲಕ ಕೆಳಗಿಳಿಸಿ, ಜೆಡಿಎಸ್ ಬೆಂಬಲ ಪಡೆದು ಬೇರೆಯವರನ್ನು ಸಭಾಪತಿ ಸ್ಥಾನಕ್ಕೆ ಕೂರಿಸುವುದು ಬಿಜೆಪಿ ಲೆಕ್ಕಾಚಾರ.
ಭೂಸ್ವಾಧೀನ ಕಾಯ್ದೆಯನ್ನು ಸರ್ಕಾರ ಜೆಡಿಎಸ್ ಬೆಂಬಲ ಪಡೆದು ಪರಿಷತ್‍ನ ಅನುಮೋದನೆ ಪಡೆದುಕೊಂಡಿದೆ. ಅದೇ ರೀತಿ ಗೋಹತ್ಯೆ ನಿಷೇಧ ಜಾಯ್ದೆಗೂ ವಿಧಾನ ಪರಿಷತ್‍ನಲ್ಲಿ ಅನುಮೋದನೆ ಪಡೆದುಕೊಳ್ಳಬೇಕಿದೆ. ಪರಿಷತ್‍ನಲ್ಲಿ ಬಿಜೆಪಿಗೆ ಬಹುಮತ ಇಲ್ಲದ ಕಾರಣ, ಜೆಡಿಎಸ್‍ನ ಬೆಂಬಲ ಪಡೆಯಲು ಮುಂದಾಗಿದೆ.
ಮೂಲಗಳ ಪ್ರಕಾರ, ಸಭಾಪತಿ ಸ್ಥಾನದಿಂದ ಕಾಂಗ್ರೆಸ್‍ನವರಾದ ಪ್ರತಾಪ್‍ಚಂದ್ರ ಶೆಟ್ಟಿ ಅವರನ್ನು ಕೆಳಗಿಳಿಸಿ ಆ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಡುವುದು. ಇದರ ಮೂಲಕ ಜೆಡಿಎಸ್‍ನ ಸಹಕಾರದೊಂದಿಗೆ ಸರ್ಕಾರ ತರುವ ಎಲ್ಲಾ ಮಸೂದೆಗಳನ್ನು ಸುಲಭವಾಗಿ ಪಾಸ್ ಮಾಡಿಕೊಳ್ಳುವುದು ಬಿಜೆಪಿಯ ಲೆಕ್ಕಾಚಾರವಾಗಿದೆ.
ಈ ಕಾರಣಕ್ಕಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಪರಿಷತ್‍ನಲ್ಲಿ ಮಂಡಿಸಿ ಅನುಮೋದನೆ ಪಡೆದ ಕಾಯ್ದೆಯಾಗಿ ಜಾರಿ ಮಾಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಂದಾಗಿದ್ದಾರೆ. ಒಂದು ವೇಳೆ ಸುಗ್ರೀವಾಜ್ಞೆ ತಂದರೂ ಮುಂದಿನ ಅಧಿವೇಶನ ವೇಳೆ ಮತ್ತೆ ಮಂಡಿಸಿ ಅನುಮತಿ ಪಡೆಯಬೇಕು. ಹೀಗಾಗಿ ಒಂದು ದಿನದ ವಿಶೇಷ ಅಧಿವೇಶನವನ್ನು ಅವಿಶ್ವಾಸ ನಿರ್ಣಯದ ನೆಪದ ಮೂಲಕ ಕರೆದು ತನ್ನ ಕಾರ್ಯ ಸಾಧಿಸಿಕೊಳ್ಳಲು ಬಿಜೆಪಿ ಹೊರಟಿದೆ ಎನ್ನಲಾಗಿದೆ.
ಸರ್ಕಾರದ ನಿರ್ಣಯವನ್ನು ಸಭಾಪತಿಗಳು ಒಪ್ಪುತ್ತಾರಾ ? ಮತ್ತೊಂದು ಕಾನೂನು ಸಮರಕ್ಕೆ ದಾರಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel