ಇಹಲೋಕ ತ್ಯಜಿಸಿದ ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ
ಕಾಸರಗೋಡು, ಸೆಪ್ಟೆಂಬರ್06: ಕೇರಳ-ಕರ್ನಾಟಕದ ಗಡಿನಾಡು ಕಾಸರಗೋಡು ಜಿಲ್ಲೆಯ ಜಗದ್ಗುರು ಶಂಕರಾಚಾರ್ಯ ಸಂಸ್ಥಾನಂ ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ಶನಿವಾರ ಮಧ್ಯರಾತ್ರಿ 12.45ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.
ಧಾರ್ಮಿಕವಾಗಿ ಸಾಂಸ್ಕೃತಿಕವಾಗಿಯೂ ಸಕ್ರಿಯರಾಗಿದ್ದ ಶ್ರೀಗಳು ಕಾಸರಗೋಡು ಗಡಿನಾಡಿನ ಸಂಸ್ಥಾನದಲ್ಲಿ ಯಕ್ಷಗಾನ, ಸಂಗೀತದ ಕೇಂದ್ರವನ್ನಾಗಿಸುವ ಜೊತೆಗೆ ಕನ್ನಡ ಉಳಿವಿಗಾಗಿ ಹೋರಾಟ ನಡೆಸಿದ್ದರು. ಕೇರಳ-ಕರ್ನಾಟಕ ಗಡಿಭಾಗದ ಶಾಲೆಯಲ್ಲಿ ಕನ್ನಡವನ್ನು ಕಲಿಸುವ ಮೂಲಕ ಕನ್ನಡ ಉಳಿವಿಗೆ ಪ್ರಯತ್ನಿಸಿದ್ದರು. ಯಕ್ಷಗಾನ ಕಲೆಯ ಮೇಲೆ ವಿಶೇಷ ಒಲವಿದ್ದ ಶ್ರೀಗಳು ಮೇಳವನ್ನು ಆಯೋಜಿಸುತ್ತಾ, ತಾಳಮದ್ದಳೆ ಕೂಟಗಳನ್ನು ನಡೆಸುತ್ತಿದ್ದರು ಮತ್ತು ಸ್ವತಃ ಭಾಗವತಿಕೆಯನ್ನೂ ನಡೆಸುತ್ತಿದ್ದರು. ಮಠದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ಶ್ರೀಗಳು ಹರಿಕಥೆಯನ್ನೂ ಮಾಡುತ್ತಿದ್ದರು