ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಮಿತಿ ಮೀರುತ್ತಿರುವ ಹಿನ್ನೆಲೆ ರಾಜ್ಯವ್ಯಾಪಿ ಭಾನುವಾರ ಲಾಕ್ ಡೌನ್ ಮಾಡಲು ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇನ್ಮುಂದೆ ರಾಜ್ಯದಲ್ಲಿ ಜುಲೈ 5ರ ಭಾನುವಾರದಿಂದ ಪ್ರತಿ ಭಾನುವಾರ ಲಾಕ್ ಡೌನ್ ಮಾಡಲಾಗುತ್ತೆ. ಅಲ್ಲದೆ, ಸರ್ಕಾರಿ ನೌಕರರಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಲು ಸಚಿವರು, ಅಧಿಕಾರಿಗಳ ಸಭೆಯಲ್ಲಿ ಸಿಎಂ ನಿರ್ಧಾರ ಮಾಡಿದ್ದಾರೆ. ನಾಳೆ ಅಂದ್ರೆ ರಾತ್ರಿ 8ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಶನಿವಾರ ಕೂಡಾ ಲಾಕ್ ಡೌನ್ ಮಾಡುವ ಬಗ್ಗೆ ಚಿಂತನೆ
ಕೊರೊನಾ ವೈರಸ್ ಹರಡದಂತೆ ತಡೆಯಲು ಭಾನುವಾರದ ಜೊತೆ ಶನಿವಾರ ಕೂಡಾ ಲಾಕ್ ಡೌನ್ ಮಾಡುವ ಬಗ್ಗೆ ಇಂದಿನ ಸಭೆಯಲ್ಲಿ ಬಿಎಸ್ ವೈ ಒಲವು ತೋರಿಸಿದ್ದಾರೆ. ಆದರೆ ತಕ್ಷಣಕ್ಕೆ ವಾರದಲ್ಲಿ ಎರಡು ದಿನ ಲಾಕ್ ಡೌನ್ ಬೇಡ ಎಂದು ಸಚಿವರು ಸಲಹೆ ನೀಡಿದ್ದು, ಒಂದೆರಡು ಭಾನುವಾರ ಲಾಕ್ ಡೌನ್ ಮಾಡಲಾಗುತ್ತೆ. ಕೊರೊನಾ ಸೋಂಕು ಪ್ರಮಾಣ ತಹಬದಿಗೆ ಬಂದರೆ ನಂತರ ಶನಿವಾರ ಮತ್ತು ಭಾನುವಾರ ಎರಡು ದಿನ ಲಾಕ್ ಡೌನ್ ಮಾಡಬಹುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಭಾನುವಾರ ಲಾಕ್ ಡೌನ್ ಮಾಡಿದ ಬಳಿಕವೂ ಕೊರೊನಾ ನಿಯಂತ್ರಣ ಸಾಧ್ಯವಾಗದಿದ್ದಲ್ಲಿ ಮತ್ತೆ ರ‍್ಯಾಂಡಮ್ ಟೆಸ್ಟ್ ಮಾಡುವ ಬಗ್ಗೆ ಇಂದಿನ ಸಭೆಯಲ್ಲಿ ಸಿಎಂಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಹೀಗಾಗಿ ಸದ್ಯ ಭಾನುವಾರ ಮಾತ್ರ ಲಾಕ್ ಡೌನ್ ಮಾಡುವ ಬಗ್ಗೆ ಸಿಎಂ ಬಿಎಸ್ ವೈ ಒಪ್ಪಿಗೆ ಸೂಚಿಸಿದ್ದಾರೆ.