ಪ್ರಧಾನಿ ಮೋದಿ ಹೆಸರಿನಲ್ಲಿ ಆಯ್ಕೆಯಾಗುವುದನ್ನು ನಿಲ್ಲಿಸಿ – ಬಿಜೆಪಿ ಶಾಸಕರಿಗೆ ಎಚ್ಚರಿಕೆ ಕೊಟ್ಟ ಬಿಜೆಪಿ ಅಧ್ಯಕ್ಷ ಭಗತ್
ಉತ್ತರಾಖಂಡ, ಅಗಸ್ಟ್29: ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಬನ್ಸಿಧರ್ ಭಗತ್ ಗುರುವಾರ ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡಿದ್ದು, ಟಿಕೆಟ್ ಮತ್ತು ಮತಗಳನ್ನು ಪಡೆಯಲು ಆಯಾ ಕ್ಷೇತ್ರದಲ್ಲಿ ಜನಪರ ಕೆಲಸ ಕಾರ್ಯಗಳನ್ನು ಮಾಡಿ. ಜನರ ಸಮಸ್ಯೆ ಆಲಿಸುವಂತೆ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಆಯ್ಕೆಯಾಗುವುದನ್ನು ನಿಲ್ಲಿಸಿ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
2022 ರ ವಿಧಾನಸಭಾ ಚುನಾವಣೆಯಲ್ಲಿ ಮತಗಳನ್ನು ಪಡೆಯಲು ಪಕ್ಷದ ಶಾಸಕರು ಮೋದಿಯವರ ಹೆಸರಿಗೆ ಅವಲಂಬಿಸಿರುವ ಬಗ್ಗೆ ಡೆಹ್ರಾಡೂನ್‌ನಲ್ಲಿ ಸುದ್ದಿಗಾರರು ಹೇಳಿದ ಪ್ರಶ್ನೆಗೆ ಉತ್ತರಿಸಿದ ಭಗತ್ ಈ ಹೇಳಿಕೆ ನೀಡಿದ್ದಾರೆ
ವಿಜಯಕ್ಕಾಗಿ ಮೋದಿ ಅಲೆಯನ್ನು ಮಾತ್ರ ಯಾರೂ ಅವಲಂಬಿಸಲಾರರು ಎಂದು ನಾನು ಖಚಿತವಾಗಿ ಹೇಳುತ್ತೇನೆ. ಎಲ್ಲರೂ ಕಷ್ಟಪಟ್ಟು ದುಡಿದು ತಮ್ಮ ಪ್ರದೇಶಗಳಿಗೆ ಭೇಟಿ ನೀಡಬೇಕಾಗುತ್ತದೆ. ಮೋದಿಯವರ ಹೆಸರಿನಲ್ಲಿ ಜನರು ಸಾಕಷ್ಟು ಮತ ಚಲಾಯಿಸಿದ್ದಾರೆ. ಈಗ ಎಲ್ಲರೂ ತಾವಾಗಿಯೇ ಶ್ರಮಿಸಬೇಕು ಎಂದು ಭಗತ್ ಹೇಳಿದರು.
ಪ್ರತಿಯೊಬ್ಬರ ಕಾರ್ಯಕ್ಷಮತೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ, ಆಗ ಮಾತ್ರ ಅವರಿಗೆ ಟಿಕೆಟ್ ಸಿಗುತ್ತದೆ. ಎಲ್ಲರ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.
ಭಗತ್ ಪಿಎಂ ಮೋದಿಯವರನ್ನು ವಿಶ್ವದ ಶ್ರೇಷ್ಠ ಮತ್ತು ಅತ್ಯಂತ ಪ್ರಭಾವಶಾಲಿ ನಾಯಕ ಎಂದು ಕರೆದರು ಮತ್ತು ಅವರು ತಮ್ಮ ಶಾಸಕರಿಗೆ ಅವರವರ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಬೇಕೆಂದು ಸೂಚಿಸುತ್ತಿದ್ದಾರೆ ಎಂದು ಹೇಳಿದರು.
ನಾವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಚುನಾವಣೆಯಲ್ಲಿ ಜನರ ಮುಂದೆ ಕೊಂಡೊಯ್ಯುತ್ತೇವೆ. ಮೋದಿ ಜಿ ಅವರ ಆಶೀರ್ವಾದದೊಂದಿಗೆ ರಾಜ್ಯ ಸರ್ಕಾರದ ಸಾಧನೆಗಳು ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ದೊಡ್ಡ ಯೋಜನೆಗಳ ಬಗ್ಗೆ ನಾವು ಜನರಿಗೆ ಹೇಳಬೇಕಾಗಿದೆ. ಇದರಲ್ಲಿ, ಸಾರ್ವಜನಿಕರೊಂದಿಗೆ ಸಂವಾದವನ್ನು ಹೆಚ್ಚಿಸುವುದು ಉಪಯುಕ್ತ ಮತ್ತು ಪರಿಣಾಮಕಾರಿಯಾಗಿದೆ ಎಂದು ಹೇಳಿದರು.