ಉಪಹಾರ ಗೃಹದಲ್ಲಿನ ಆಹಾರ ಸೇವಿಸಿ ವಿದ್ಯಾರ್ಥಿನಿ ಸಾವು
ಕಾಸರಗೋಡು: ಉಪಹಾರ ಗೃಹದಲ್ಲಿನ ಆಹಾರ ಸೇವಿಸಿ 16 ವರ್ಷದ ಹುಡುಗಿಯೊಬ್ಬಳು ಮೃತಪಟ್ಟಿರುವ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡು ಸಮೀಪದ ಕರಿವಲ್ಲೋರ್ ನಿವಾಸಿ ದೇವಾನಂದ ಕನಂಗಾಡ್ (16) ಮೃತ ದುರ್ದೈವಿ. ಹಾಗೇ ಆಹಾರ ಸೇವಿಸಿ 18 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೇವಾನಂದ ಕನಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದು, ವಿಷಪೂರಿತ ಉಪಾಹಾರ ಸೇವನೆ ಶಂಕೆ ವ್ಯಕ್ತಪಡಿಸಿದ್ದಾರೆ. ಉಪಾಹಾರ ಸೇವಿಸಿದ ಜ್ಯೂಸ್ ಅಂಗಡಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮಳಿಗೆಯನ್ನು ಬಂದ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಅಸ್ವಸ್ಥಗೊಂಡ 18 ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಯಾರ ಸ್ಥಿತಿಯೂ ಗಂಭೀರವಾಗಿಲ್ಲ ಎಂದು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಸಚಿವ ಎಂ.ವಿ.ಗೋವಿಂದನ್, ರಾಜ್ಯದೆಲ್ಲೆಡೆ ಇರುವ ಹೊಟೇಲ್‌ಗಳಲ್ಲಿ ಗುಣಮಟ್ಟದ ಆಹಾರ ನೀಡುವಂತೆ ಸರ್ಕಾರ ಖಚಿತಪಡಿಸುತ್ತದೆ. ರೆಸ್ಟೋರೆಂಟ್‌ಗಳಲ್ಲಿ ನೀಡಲಾಗುವ ಆಹಾರವು ಉತ್ತಮ ಗುಣಮಟ್ಟದ್ದಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ರಾಜ್ಯಾದ್ಯಂತ ತಪಾಸಣೆ ನಡೆಸುತ್ತದೆ ಎಂದು ಭರವಸೆ ನೀಡಿದ್ದಾರೆ.








