ನವದೆಹಲಿ: ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಯೋರ್ವ ನಿಷೇಧಿತ ಭಯೋತ್ಪಾದಕ ಐಎಸ್ಐಎಸ್ನೊಂದಿಗೆ (ISIS) ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಶಕ್ಕೆ ಪಡೆದಿದೆ.
ಫೈಜಾನ್ ಅನ್ಸಾರಿ ಅಲಿಯಾಸ್ ಫೈಜ್ (19) ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈ ವಿದ್ಯಾರ್ಥಿಯ ಮನೆಯನ್ನು ಶೋಧಿಸಿದಾಗ ಸರಿಯಾದ ಪುರಾವೆಗಳು ಸಿಕ್ಕ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಅಲ್ಲದೇ, ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾರ್ಖಂಡ್ ನ (Jharkhand) ಲೋಹರ್ಡಗಾ ಜಿಲ್ಲೆಯ ಫೈಜ್ ಮನೆ ಮತ್ತು ಉತ್ತರ ಪ್ರದೇಶದ ಅಲಿಗಢದಲ್ಲಿ ಬಾಡಿಗೆ ಕೊಠಡಿಯಲ್ಲಿ ಶೋಧ ಕಾರ್ಯವು ಕಳೆದ ಎರಡು ದಿನಗಳ ಹಿಂದೆ ನಡೆದಿತ್ತು. ಆಗ ಎಲೆಕ್ಟ್ರಾನಿಕ್ ಉಪಕರಣಗಳು, ಅನುಮಾನಾಸ್ಪದ ವಸ್ತುಗಳು ಮತ್ತು ದಾಖಲೆಗಳು ಸಿಕ್ಕಿದ್ದವು. ಆರೋಪಿ ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ರಚಿಸಿ ಐಸಿಸಿ ಮಾಹಿತಿ ಹಂಚುತ್ತಿದ್ದ. ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಯೋಜಿಸಿದ್ದ. ತನಿಖೆ ವೇಳೆ ಆತನ ಜೊತೆ ಹಲವು ಸಹಚರರು ಐಸಿಸ್ ಜೊತೆ ಕೈ ಜೊಡಿಸಿರುವುದು ಬೆಳಕಿಗೆ ಬಂದಿದೆ.