ಹಿಜಾಬ್ ಧರಿಸಿ ಪರೀಕ್ಷೆಗೆ ಬಂದ ವಿದ್ಯಾರ್ಥಿನಿಯರು | ಅಧಿಕಾರಿಗಳು ಮತ್ತು ಪೋಷಕರ ನಡುವೆ ವಾಗ್ವಾದ
ರಾಯಚೂರು: SSLC ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯರು ಹಿಜಾಬ್-ಬೂರ್ಕಾ ಹಾಕಿಕೊಂಡು ಬಂದಿದ್ದರು, ಈ ವೇಳೆ ವಿದ್ಯಾರ್ಥಿನಿಯರ ಪೋಷಕರ ಮತ್ತು ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆದಿರುವ ಘಟನೆ ರಾಯಚೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಟ್ಯಾಗೋರ್ ಮೆಮೋರಿಯಲ್ ಪರೀಕ್ಷಾ ಕೇಂದ್ರದ ಮುಂದೆ ನಡೆದಿದೆ.
ಹಿಜಾಬ್ ಧರಿಸಿಕೊಂಡು ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸಲು ಮುಂದಾದ ವಿದ್ಯಾರ್ಥನಿಯರನ್ನು ಅಧಿಕಾರಿಗಳು ತಡೆದಿದ್ದಾರೆ. ಆಗ ವಿದ್ಯಾರ್ಥಿನಿಯರ ಪೋಷಕರ ಮತ್ತು ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆದಿದೆ. ಅಲ್ಲದೇ ಪೋಷಕರು ಮಕ್ಕಳೊಂದಿಗೆ ಪರೀಕ್ಷಾ ಕೆಂದ್ರದ ಒಳಗೆ ಬರಲು ಮುಂದಾಗಿದ್ದರು. ಈ ವೇಳೆ ಪೋಷಕರಿಗೆ ತಿಳಿ ಹೇಳಿ ಅಧಿಕಾರಿಗಳು ವಾಪಾಸ್ ಕಳುಹಿಸಿದ್ದಾರೆ.
ಹಾಗೇ ನಗರದ ಮತ್ತೊಂದು ಪರೀಕ್ಷಾ ಕೇಂದ್ರವಾದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಹಿಜಾಬ್, ಬುರ್ಕಾ ಧರಿಸಿ ಆಗಮಿಸಿದ ವಿದ್ಯಾರ್ಥಿನಿಯರು ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ತೆಗೆಯುವುದಾಗಿ ಹೇಳಿ ಒಳಗೆ ಹೋಗಿದ್ದಾರೆ. ಆದರೆ ಪರೀಕ್ಷಾ ಕೊಠಡಿಗಳಲ್ಲೂ ಹಿಜಾಬ್ ಧರಿಸಿಯೆ ವಿದ್ಯಾರ್ಥಿನಿಯರು ಕುಳಿತಿರುವ ದೃಶ್ಯಗಳು ಕಂಡುಬಂದಿವೆ. ಪರೀಕ್ಷೆ ಆರಂಭದ ವೇಳೆ ಹಿಜಾಬ್ ತೆಗೆಸುವ ಬಗ್ಗೆ ಸಿಬ್ಬಂದಿ ಸಮಜಾಯಿಸಿ ನೀಡಿದ್ದಾರೆ.
ಜಿಲ್ಲೆಯಲ್ಲಿ 114 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, 31,896 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆಗಾಗಿ 16 ಜಾಗೃತಿ ದಳ, 114 ಸ್ಥಾನಿಕ ಜಾಗೃತಿ ದಳ ಅಧಿಕಾರಿಗಳು ಸೇರಿದಂತೆ ಅಧೀಕ್ಷಕರು, ಉಪ ಅಧಿಕ್ಷಕರು, ಕಸ್ಟೋಡಿಯನ್ ಸೇರಿ 286 ಅಧಿಕಾರಿಗಳನ್ನು ನೇಮಿಸಲಾಗಿದೆ.