ಬೆಳಗಾವಿ: ಜಿಲ್ಲೆಯ ಗಡಿಗ್ರಾಮ ಪಿರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಸಂಬಂಧ ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ಸಂಘರ್ಷಕ್ಕೆ ತೆರೆ ಬಿದ್ದಿದೆ.
ಕಳೆದ ರಾತ್ರಿ ರಾಯಣ್ಣ ಅಭಿಮಾನಿಗಳು ಪಿರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದರು. ಪ್ರತಿಮೆ ಸ್ಥಾಪನೆಗೆ ವಿರೋಧಿಸಿ ಶಿವಸೇನೆ ಕಾರ್ಯಕರ್ತರು ಶಿವಾಜಿ ಮೂರ್ತಿ ಸ್ಥಾಪನೆಗೆ ಮುಂದಾಗಿದ್ದರು. ಈ ವಿಚಾರವಾಗಿ ರಾಯಣ್ಣನ ಅಭಿಮಾನಿಗಳು ಹಾಗೂ ಶಿವಸೇನೆ ಕಾರ್ಯಕರ್ತರ ನಡುವೆ ಗಲಾಟೆ ನಡೆದು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು.
ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದ ಕಾರಣ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಎಡಿಜಿಪಿ ನೇತೃತ್ವದಲ್ಲಿ ಸಂಧಾನ ಸಭೆಯ ನಡೆಯಿತು. ಸಭೆಯಲ್ಲಿ ರಾಯಣ್ಣ ಅಭಿಮಾನಿಗಳು, ಕನ್ನಡಪರ ಸಂಘಟನೆಗಳ ಹೋರಾಟಗಾರರು ಹಾಗೂ ಮರಾಠಿಗರು ಪಾಲ್ಗೊಂಡಿದ್ದರು.
ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಪ್ರತಿಮೆ ಇರಲು ಮರಾಠಿಗರು ಒಪ್ಪಿಗೆ ನೀಡಿದ್ದಾರೆ. ಜತೆಗೆ ಪ್ರತಿಮೆ ಸ್ಥಾಪಿಸಿದ ಸ್ಥಳಕ್ಕೆ ಶಿವಾಜಿ ವೃತ್ತ ಎಂದು ಹೆಸರಿಡಲು ಕನ್ನಡಿಗರು ಸಮ್ಮತಿ ಸೂಚಿಸಿದರು. ಹೀಗಾಗಿ ಕೆಲ ದಿನಗಳಿಂದ ಕಗ್ಗಂಟಾಗಿದ್ದ ರಾಯಣ್ಣನ ಪ್ರತಿಮೆ ವಿವಾದ ಸುಖಾಂತ್ಯ ಕಂಡಿದೆ.