ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಕಾವು ರಂಗೇರಿದೆ. ಈ ಮಧ್ಯೆ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪ್ರಚಾರದಿಂದ ಹಿಂದೆ ಉಳಿದಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಸ್ಪರ್ಧಿಸಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಜಯ ಸಾಧಿಸಿದ್ದರು. ಆನಂತರ ಅವರು ಬಿಜೆಪಿ ಸೇರುವುದಾಗಿ ಘೋಷಿಸಿದ್ದರು. ಆದರೆ, ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ಮೈತ್ರಿಯಾಗಿದ್ದು, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಾಗಿದೆ.
ಹೀಗಾಗಿ ತಾವೇ ಘೋಷಿಸಿದಂತೆ ಸುಮಲತಾ ಬಿಜೆಪಿ ಸೇರಿದ್ದಾರೆ. ಆದರೆ, ಟಿಕೆಟ್ ಸಿಗದ ಕಾರಣ ಅವರು ಮೈತ್ರಿಗೆ ಬೆಂಬಲ ಸೂಚಿಸಿದ್ದರು. ಇದುವರೆಗೂ ಅವರು ಮಂಡ್ಯದಲ್ಲಿ ಪ್ರಚಾರಕ್ಕೆ ಬಂದಿಲ್ಲ. ಇಂದಿನ ಪ್ರಚಾರದ ಬಗ್ಗೆ ಪಕ್ಷದಿಂದ ಯಾವುದೇ ಸ್ಪಷ್ಟ ನಿರ್ಧಾರ ತಿಳಿಸದ ಕಾರಣ ಅದು ರದ್ದಾಗಿದೆ. ಮಂಡ್ಯಕ್ಕೆ ಆಗಮಿಸದೆ ಸುಮಲತಾ ಬೆಂಗಳೂರಿನಲ್ಲಿಯೇ ಉಳಿದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿ ಪರ ಸುಮಲತಾ ಮತಯಾಚನೆ ಮಾಡುವ ಕಾರ್ಯಕ್ರಮ ಮಂಗಳವಾರ ನಿಗದಿಯಾಗಿತ್ತು. ಆದರೆ, ಮಂಡ್ಯ ಸಂಸದೆಯಾಗಿ ಇಲ್ಲಿಯವರೆಗೆ ಹೆಚ್ಡಿಕೆ ಜೊತೆ ಪ್ರಚಾರದಲ್ಲಿ ಕಾಣಿಸಿಲ್ಲ. ಸುಮಲತಾ ನಡೆ ಬಗ್ಗೆ ಮೈತ್ರಿ ಪಾಳಯದಲ್ಲಿ ಈಗ ಭಾರೀ ಚರ್ಚೆಯಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ನಿಂತಿದ್ದ ಸುಮಲತಾಗೆ ಬಿಜೆಪಿ ಬೆಂಬಲ ನೀಡಿತ್ತು.