ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗೆ ಉದ್ಯಮಿ ವಿಜಯ ಮಲ್ಯ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ಕುರಿತಾದ ತೀರ್ಪನ್ನು ನ್ಯಾಯಾಲಯವು ಕಾಯ್ದಿರಿಸಿದೆ. 2017ರಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ತಮ್ಮ ಮಕ್ಕಳಿಗೆ 295.415 ಕೋಟಿ ರೂಪಾಯಿ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ವಿಜಯ ಮಲ್ಯ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದ್ರೆ ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಮಲ್ಯ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದಾರೆ. ನ್ಯಾಯಾಲಯದ ಹಲವು ಆದೇಶಗಳನ್ನು ಉಲ್ಲಂಘಿಸಿ ಬ್ರಿಟಿಷ್ ಕಂಪನಿ ಡಿಯಾಗೆಯೊನಿಂದ ಪಡೆದಿದ್ದ 295.415 ಕೋಟಿ ರೂಪಾಯಿಯನ್ನು ವಿಜಯ ಮಲ್ಯ ತಮ್ಮ ಮಕ್ಕಳಿಗೆ ವರ್ಗಾಯಿಸಿದ್ದಾರೆ ಎಂದು ಎಸ್ ಬಿಐ ನೇತೃತ್ವದ ಬ್ಯಾಂಕ್ಗಳ ಒಕ್ಕೂಟ ಅರ್ಜಿ ಸಲ್ಲಿಸಿತ್ತು.