ಮಡಿಕೇರಿ: ಜೂನ್ 14ರಂದು ಮುಂಬೈನ ತನ್ನ ಅಪಾರ್ಟ್‍ಮೆಂಟ್‍ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತಿವೆ.
ಸುಶಾಂತ್ ಸಿಂಗ್ ರಜಪೂತ್ ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ಜಾಗ ಖರೀದಿಸಿ ಸಾವಯವ ಕೃಷಿ ಜೊತೆಗೆ ಫಾರಂ ಹೌಸ್ ಮಾಡುವ ಚಿಂತನೆ ನಡೆಸಿದ್ದರು ಎನ್ನಲಾಗಿದೆ.
ತನ್ನ ಸ್ನೇಹಿತ ಮಹೇಶ್ ರೆಡ್ಡಿ ಎಂಬುವವರಿಗೆ ಕೊಡಗಿನಲ್ಲಿ ಸೂಕ್ತ ಜಾಗ ಗುರುತಿಸುವಂತೆ ತಿಳಿಸಿದ್ದರಂತೆ. ಅದರಂತೆ ವಿರಾಜಪೇಟೆ-ಕೇರಳ ನಡುವಿನ ಪೆರಂಬಾಡಿ ಬಳಿಯ ಜಾಗವನ್ನು ಆಯ್ಕೆ ಮಾಡಲಾಗಿತ್ತು. ಹೀಗಾಗಿ ಸುಶಾಂತ್ ಕೊಡಗು ಜಿಲ್ಲೆಗೆ ಬರಲು ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ.ಪಾಟ್ನಾದಲ್ಲಿ ಸುಶಾಂತ್ ತಂದೆ ಕೆ.ಕೆ ಸಿಂಗ್ ನೀಡಿದ ದೂರಿನಲ್ಲಿ ಕರ್ನಾಟಕದ ಕೊಡಗಿನಲ್ಲಿ ಕೃಷಿ ಚಟುವಟಿಕೆ ನಡೆಸುವ ಉದ್ದೇಶವಿರುವುದಾಗಿ ಹೇಳುತ್ತಿದ್ದ ಎಂದು ಉಲ್ಲೇಖ ಮಾಡಿದ್ದಾರೆ.
ಮಹೇಶ್ ರೆಡ್ಡಿ ಜೊತೆ ಕೊಡಗಿಗೆ ತೆರಳುವ ಬಗ್ಗೆ ತನ್ನ ಪ್ರೇಯಸಿ ರೇಹಾ ಜೊತೆ ಮಾತುಕತೆ ನಡೆಯುವ ವೇಳೆ ಜಗಳವೂ ನಡೆದಿತ್ತು ಎನ್ನಲಾಗಿದೆ.
ಆದರೆ, ಸುಶಾಂತ್ ಸಿಂಗ್‍ರ ಆಸೆ ಈಡೇರಲೇ ಇಲ್ಲ. ವಿಧಿಯ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ ಸುಶಾಂತ್ ಸಿಂಗ್ ರಜಪೂತ್ ಬರೀ ನೆನಪು ಮಾತ್ರ. ಆತನ ಕ್ರಿಯಾಶೀಲ ವ್ಯಕ್ತಿತ್ವ, ಹೊಸತನಕ್ಕೆ ತುಡಿಯುವ ಹಂಬಲ ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ಫಾರಂಹೌಸ್ ಮಾಡಬೇಕು ಎನ್ನುವುದಕ್ಕೆ ಒಂದು ಉತ್ತಮ ನಿದರ್ಶನವಾಗಿದೆ.