ಸುಶಾಂತ್ ಸಾವಿನ ನಂತರ ಬಾಲಿವುಡ್ ನ ಚಿತ್ರಣವೇ ಬದಲಾಗಿಹೋಗಿದೆ. ಆಗೊಮ್ಮೆ ಈಗೊಮ್ಮೆ ಕೇಳಿಬರ್ತಿದ್ದ ನೆಪೋಟಿಸಮ್ ಆರೋಪದ ಚರ್ಚೆಗಳು ಸುಶಾಂತ್ ಸಾವಿನ ಬಳಿಕ ತಾರಕಕ್ಕೇರಿದೆ. ಬಾಲಿವುಡ್ ನ ದೊಡ್ಡ ದೊಡ್ಡ ಮಂದಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕರಣ್ ಜೋಹರ್ , ಮಹೇಶ್ ಭಟ್ ನಂತಹ ದೊಡ್ಡ ಕುಳಗಳು ಸ್ವಜನಪಕ್ಷಪಾತದ ಆರೋಪದಡಿ ಸಿಲುಕಿ ಒದ್ದಾಡುತ್ತಿದ್ದಾರೆ. ಸ್ವಜನಪಕ್ಷಪಾತದ ವಿರುದ್ಧ ಬಾಲಿವುಡ್ ನ ಹಲವು ಖ್ಯಾತ ನಟರೂ ಧ್ವನಿಯೆತ್ತಿದ್ದಾರೆ.
‘ನೆಪೋಟಿಸಮ್ ಸ್ಟಾರ್ಸ್’ ಗಳೆಂಬ ಅಪಕೀರ್ತಿಗೆ ಪಾತ್ರರಾಗಿರುವ ಹಲವು ನಟರರಿಗೆ ಈಗ ಅಭದ್ರತೆ ಎದುರಾಗಿದೆ. ಇದೀಗ ಆ ಸಾಲಿಗೆ ಆಲಿಯಾ ಭಟ್ ಹಾಗೂ ತಂದೆ ಮಹೇಶ್ ಭಟ್ ಸಹ ಸೇರಿದ್ದಾರೆ. ಹೌದು ಸ್ವಜನಪಕ್ಷಪಾತದಿಂದಲೇ ಇಂಡಸ್ಟ್ರಿಯಲ್ಲಿ ಬೆಳೆದು ದೊಡ್ಡ ದೊಡ್ಡ ಸ್ಟಾರ್ ಪಟ್ಟ ಗಳಿಸಿಕೊಂಡ ನಟರ ಪಟ್ಟಿಯಲ್ಲಿ ಆಲೀಯಾ ಕೂಡ ಒಬ್ಬರು. ಅವರ ತಂದೆ ನಿರ್ದೇಶಕ ಮಹೇಶ್ ಭಟ್ ಅವರು ಸುಶಾಂತ್ ಸಾವಿನ ಪ್ರಕರಣದ ಪ್ರಮುಖ ಅನುಮಾನಿತರಲ್ಲಿ ಒಬ್ಬರು. ಇದೀಗ ಮಹೇಶ್ ಭಟ್ ನಿರ್ದೇಶನದ ಸಡಕ್ 2 ಚಿತ್ರ ಬಿಡುಗಡೆಗೆ ಅಡೆಕತ್ತರಿ ಬೀಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. 
ಹೌದು ಸಂಜಯ್ ದತ್, ಪೂಜಾ ಭಟ್, ಆಲಿಯಾ ಭಟ್, ಆದಿತ್ಯ ರಾಯ್ ಕಪೂರ್ ನಂತಹ ದೊಡ್ಡ ತಾರಾ ಬಳಗವನ್ನು ಹೊಂದಿರುವ ಈ ಚಿತ್ರದ ಬಹಿಷ್ಕರಕ್ಕೆ ಇದೀಗ ಅಭಿಯಾನ ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಲಿರುವ ಸಡಕ್ 2 ಚಿತ್ರ ಬಹಿಷ್ಕಾರ ಹಾಕುವಂತೆ ಒತ್ತಾಯಗಳು ಕೇಳಿಬರುತ್ತಿದೆ. ಅಲ್ಲದೇ ಐಎಂಬಿಡಿ ರೇಟಿಂಗ್ಸ್ ಕಡಿತಗೊಳಿಸುವಂತೆ ಸಹ ಕರೆ ನೀಡಲಾಗಿದೆ.
ಮಹೇಶ್ ಭಟ್ ಮಕ್ಕಳಾದ ಆಲಿಯಾ, ಪೂಜಾ. ಸುನಿಲ್ ದತ್, ನರ್ಗಿಸ್ ಮಗನಾದ ಸಂಜಯ್ ದತ್, ನಟ ರಾಯ್ ಕಪೂರ್, ನಟಿ ಸಲೋಮೆ ರಾಯ್ ಕಪೂರ್ ಪುತ್ರ ಆದಿತ್ಯ ರಾಯ್ ಕಪೂರ್ ಇವರೆಲ್ಲರ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದು, ಸಿನಿಮಾದಲ್ಲಿರುವ ನಟರೆಲ್ಲಾ ನೆಪೊಟಿಸಮ್ ನ ಉತ್ಪನ್ನಗಳೇ ಎಂಬ ಟೀಕಾಪ್ರಹಾರಗಳು ಇದೀಗ ತಾರಕಕ್ಕೇರಿವೆ. ಮತ್ತೊಂದೆಡೆ ಸುಶಾಂತ್ ಸಿಂಗ್ ಸಾವಿನ ಮುಖ್ಯ ಆರೋಪಿ ರಿಯಾ ಚಕ್ರವರ್ತಿ ಜೊತೆಗೆ ಆಪ್ತ ಸಂಬಂಧ ಹೊಂದಿರುವ ಮಹೇಶ್ ಭಟ್ ಬಾಲಿವುಡ್ ಸ್ವಜನಪಕ್ಷಪಾತದ ಪಿತಾಮಹರಲ್ಲಿ ಒಬ್ಬರು ಎಂದು ಆರೋಪಿಸಲಾಗಿದೆ.








