ಐಪಿಎಲ್ ಪ್ರಾಯೋಜಕತ್ವ ವಿಚಾರ – ಬಿಸಿಸಿಎಗೆ ಎಚ್ಚರಿಕೆ ನೀಡಿದ ಎಸ್‍ಜೆಎಮ್
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಈಗ ಮತ್ತೊಂದು ತಲೆನೋವು ಎದುರಾಗಿದೆ. ಹೇಗೋ ಕಷ್ಟಪಟ್ಟು 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಸಂಘಟಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಫ್ರಾಂಚೈಸಿಗಳು ಸಹ ಪೂರ್ವ ತಯಾರಿ ಮಾಡಿಕೊಳ್ಳುತ್ತಿವೆ. ಆದ್ರೆ ಕೇಂದ್ರ ಸರ್ಕಾರದ ಅನುಮತಿ ಇನ್ನೂ ಸಿಕ್ಕಿಲ್ಲ. ಇನ್ನೊಂದೆಡೆ ಬಿಸಿಸಿಐಗೆ ಹೊಸ ಸಂಕಷ್ಟ ಎದುರಾಗಿದೆ. ಐಪಿಎಲ್ ಪ್ರಾಯೋಜಕತ್ವ ವಿಚಾರದಲ್ಲಿ ಬಿಸಿಸಿಐ ತೆಗೆದುಕೊಂಡ ನಿರ್ಧಾರದಿಂದ ಈಗಾಗಲೇ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಟೀಕೆ, ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಗಲ್ವಾನ್ ಗಡಿಯಲ್ಲಿ ಚೀನಿ ಸೈನಿಕರ ಗುಂಡಿನ ದಾಳಿಗೆ ಭಾರತದ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ. ಇದ್ರಿಂದ ಭಾರತದಲ್ಲಿ ಚೀನಾ ವಸ್ತುಗಳನ್ನು ಬ್ಯಾನ್ ಮಾಡುವ ಅಭಿಯಾನವೂ ಶುರುವಾಗಿದೆ. ಅದೇ ರೀತಿ ಕೇಂದ್ರ ಸರ್ಕಾರ 50ಕ್ಕೂ ಹೆಚ್ಚು ಚೀನಿ ಆಪ್ ಗಳನ್ನು ಬ್ಯಾನ್ ಮಾಡಿದೆ. ಈ ನಡುವೆ ಬಿಸಿಸಿಐ 2017ರಲ್ಲಿ ಚೀನಾ ಮೂಲದ ವಿವೋ ಕಂಪೆನಿಯ ಜೊತೆ 2199 ಕೋಟಿ ರೂಪಾಯಿಗೆ ಐಪಿಎಲ್ ಪ್ರಾಯೋಜಕತ್ವದ ಒಪ್ಪಂದಕ್ಕೆ ಸಹಿ ಮಾಡಿಕೊಂಡಿತ್ತು.
ಇದು ಈಗ ಬಿಸಿಸಿಐಗೆ ಸಂಕಷ್ಟವನ್ನು ತಂದೊಡ್ಡಿದೆ. ಈ ಬಾರಿಯ ಐಪಿಎಲ್ ಗೆ ವಿವೋ ಕಂಪೆನಿಯ ಪ್ರಾಯೋಜಕತ್ವವನ್ನು ಮುಂದುರಿಸುವಂತೆ ನಿರ್ಧಾರವನ್ನು ತೆಗೆದುಕೊಂಡಿದೆ.
ಈಗಾಗಲೇ ಸಾಮಾಜಿಕ ಜಾಲ ತಾಣದಲ್ಲಿ ಈ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದವು. ಇದೀಗ ಆರ್‍ಎಸ್‍ಎಸ್‍ನ ಅಂಗ ಸಂಸ್ಥೆಯಾದ ಸ್ವದೇಶಿ ಜಾಗೃತಿ ಮಂಚ್ (ಎಸ್‍ಜೆಎಮ್) ಬಿಸಿಸಿಐ ವಿರುದ್ಧ ತಿರುಗಿಬಿದ್ದಿದೆ. ಬಿಸಿಸಿಐ ಚೀನಾ ಮೂಲದ ವಿವೋ ಕಂಪೆನಿಯ ಪ್ರಾಯೋಜಕತ್ವವನ್ನು ಹಿಂಪಡೆಯಬೇಕು ಎಂದು ಎಂದು ಎಸ್‍ಜೆಎಮ್ ಆಗ್ರಹಿಸಿದೆ.
ದೇಶದಲ್ಲಿ ಚೀನಾ ವಸ್ತುಗಳನ್ನು ಬ್ಯಾನ್ ಮಾಡಬೇಕು ಎಂದು ಸ್ವದೇಶಿ ಜಾಗೃತ್ ಮಂಚ್ ಮುಂಚೂಣಿಯಲ್ಲಿ ನಿಂತುಕೊಂಡು ಅಭಿಯಾನ ನಡೆಸುತ್ತಿದೆ. ಒಂದು ವೇಳೆ ಬಿಸಿಸಿಐ ಪ್ರಾಯೋಜಕತ್ವವನ್ನು ಹಿಂಪಡೆದುಕೊಳ್ಳದಿದ್ರೆ ಭಾರತೀಯರು ಐಪಿಎಲ್ ಟೂರ್ನಿಯನ್ನು ಬಹಿಷ್ಕಾರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.
ಬಿಸಿಸಿಐ ದೇಶ ಮತ್ತು ದೇಶದ ರಕ್ಷಣೆ ಬಗ್ಗೆ ಯೋಚನೆ ಮಾಡಬೇಕು. ಇದು ತುಂಬಾ ಸೂಕ್ಷ್ಮವಾದ ವಿಚಾರ. ಇಡೀ ಜಗತ್ತೇ ಚೀನಾ ವಸ್ತುಗಳನ್ನು ಬ್ಯಾನ್ ಮಾಡುತ್ತಿವೆ. ಅಂತಹುದ್ದರಲ್ಲಿ ಬಿಸಿಸಿಐ ಐಪಿಎಲ್ ಮೂಲಕ ಚೀನಾಗೆ ಬೆಂಬಲ ನೀಡುತ್ತಿದೆ. ದೇಶದ ಹಿತ ಮುಖ್ಯ. ದೇಶದ ರಕ್ಷಣೆ ಮೊದಲ ಆದ್ಯತೆ ಎಂದು ಬಿಸಿಸಿಐ ಅರ್ಥ ಮಾಡಿಕೊಳ್ಳಬೇಕು ಎಂದು ಎಸ್‍ಜೆಎಂನ ರಾಷ್ಟ್ರೀಯ ಸಹ ಸಂಚಾಲಕ ಅಶ್ವನಿ ಮಹಾಜನ್ ಹೇಳಿದ್ದಾರೆ.
ಮತ್ತೊಂದೆಡೆ ಪ್ರತಿಪಕ್ಷಗಳು ಕೂಡ ಬಿಸಿಸಿಐ ನಿರ್ಧಾರಕ್ಕೆ ಟೀಕೆ ಮಾಡಿವೆ. ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಅವರು ಬಿಸಿಸಿಐ ವಿರುದ್ಧ ಟೀಕೆ ಮಾಡಿ ಆಡಳಿತ ಪಕ್ಷ ಬಿಜೆಪಿಗೂ ಟಾಂಗ್ ಕೊಟ್ಟಿದ್ದಾರೆ. ಆತ್ಮನಿರ್ಭರ ಭಾರತ ಅಭಿಯಾನ್. ಕ್ರಿಕೆಟ್‍ಗೆ ಮತ್ತೆ ಸ್ವಾಗತ… ಚೀನಾಗೆ ಲಾಭಾದಯಕವಾಗುತ್ತಿದೆ. ಬಿಜೆಪಿಯ ದ್ವಂದ್ವ ನಿಲುವು ಬಹಿರಂಗಗೊಂಡಿದೆ ಎಂದು ಟ್ವಿಟ್ ಮಾಡಿದ್ದಾರೆ.