ಪ್ರತಿಭೆಗೆ ಅಡ್ಡಿಯಾದ ಅರ್ಥಿಕ ಸಮಸ್ಯೆ – ಸಿಗಲಿಲ್ಲ ಅಂತಾರಾಷ್ಟ್ರೀಯ ಮನ್ನಣೆ – ಜಗದೀಶ್ ಪೂಜಾರಿಯವರ ಅಪ್ರತಿಮ ಸಾಧನೆಗೆ ನಮ್ಮದೊಂದು ಸಲಾಮ್
ಮಂಗಳೂರು, ಸೆಪ್ಟೆಂಬರ್08: ಜೀವನದಲ್ಲಿ ಏನನ್ನಾದರೂ ಸಾಧಿಸುವ ಸಂಕಲ್ಪವಿದ್ದರೆ, ಎದುರಾಗುವ ಅಡೆ ತಡೆಗಳನ್ನು ಮೀರಿ ಗುರಿ ಮುಟ್ಟುವ ಮನಸ್ಸಿದ್ದರೆ, ಯಶಸ್ಸು ಕಾಣಲು ಸಾಧ್ಯ. ತಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು ಸಾಧನೆಯ ಶಿಖರವನ್ನು ಏರಿ ಉಳಿದವರಿಗೆ ಮಾದರಿಯಾದವರು ಕೆಲವರು. ಅಂತಹವರಲ್ಲಿ ಒಬ್ಬರು ದಿವ್ಯಾಂಗ ಚೇತನರಾದ ಜಗದೀಶ್ ಪೂಜಾರಿ.
ಮಂಗಳೂರಿನ ಅಡ್ಯಾರ್ ಪದವಿನ ಲಿಂಗಪ್ಪ ಪೂಜಾರಿ ಮತ್ತು ಯಮುನಾ ದಂಪತಿಗಳ ಪುತ್ರರಾದ ಇವರು ಬಾಲ್ಯದಲ್ಲಿ ನಡೆದ ದುರ್ಘಟನೆಯಿಂದ ಕಾಲಿನ ಸ್ವಾಧೀನವನ್ನು ಕಳೆದುಕೊಂಡರು. ಅರ್ಥಿಕ ಬಡತನದಿಂದ ಕಂಗೆಟ್ಟಿದ್ದ ಕುಟುಂಬಕ್ಕೆ ಮಗನ ಈ ಪರಿಸ್ಥಿತಿಯಿಂದಾಗಿ ಬರಸಿಡಿಲು ಬಡಿದಂತಾಯಿತು.
ಶಾಲಾ ದಿನಗಳಲ್ಲಿ ಆಟೋಟ ಸ್ಪರ್ಧೆಗಳಲ್ಲಿ ಆಸಕ್ತಿ ಹೊಂದಿದ್ದ ಇವರನ್ನು ದೇಹದಾರ್ಢ್ಯ ಸ್ವರ್ಧೆ ಆಕರ್ಷಿಸಿತು. ತಾನು ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆನ್ನುವ ಹುಮ್ಮಸ್ಸು ಅವರನ್ನು ಫಿಟ್ನೆಸ್ ಜಿಮ್ ಗೆ ಸೇರ್ಪಡೆಗೊಳ್ಳುವಂತೆ ಮಾಡಿತು. ತರಬೇತಿದಾರರಾದ ಸಂದೀಪ್ ಮತ್ತು ಅಜಯ್ ಇವರಿಗೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು. ಭಾಗವಹಿಸಿದ ಮೊದಲ ಸ್ಪರ್ಧೆಯಲ್ಲೇ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡ ಇವರು ಈ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅನನ್ಯವಾದುದು. ತನ್ನ ಕನಸಿನ ಕ್ಷೇತ್ರದಲ್ಲಿ ಸಾಧನೆ ಮಾಡುವ ಇವರ ಛಲ ಇಂದಿನ ಯುವ ಜನತೆಗೆ ಮಾದರಿ.
ಕೊರತೆಗೆ ಕೊರಗದೆ ಯಶಸ್ಸಿನ ಮಾರ್ಗದಲ್ಲಿ ನಡೆದ ಜಗದೀಶ್ ಪೂಜಾರಿ ಪಡೆದ ಪ್ರಶಸ್ತಿಗಳು ಹಲವಾರು. ಮಿಸ್ಟರ್ ದ.ಕ., ಮಿಸ್ಟರ್ ಕರ್ನಾಟಕ, ಮಿಸ್ಟರ್ ಕಾಸರಗೋಡು, ಮಿಸ್ಟರ್ ಕರಾವಳಿ, ಮಿಸ್ಟರ್ ಸೌತ್ ಇಂಡಿಯಾ ಒಳಗೊಂಡಂತೆ 80ಕ್ಕೂ ಹೆಚ್ಚಿನ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡ ಸಾಧಕರಿವರು. ಅರ್ಥಿಕ ಸಂಕಷ್ಟದಿಂದಾಗಿ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಲಿಲ್ಲವೆಂಬ ಕೊರಗು ಅವರದು. ಈ ಸಾಧಕನ ಪ್ರತಿಭೆಯನ್ನು ಗುರುತಿಸಿ ಸರ್ಕಾರ ಇವರಿಗೆ ಉದ್ಯೋಗವನ್ನು ದೊರಕಿಸಿಕೊಟ್ಟಲ್ಲಿ ಇವರು ಇನ್ನಷ್ಟು ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ.
ಪ್ರಸ್ತುತ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನಲ್ಲಿ ಜಿಮ್ ತರಬೇತುದಾರರಾಗಿರುವ ಜಗದೀಶ್ ಪೂಜಾರಿ ಅವರ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸು ನನಸಾಗಲಿ ಎಂಬ ಹಾರೈಕೆ ನಮ್ಮದು.