ನವದೆಹಲಿ: ದೇಶದ ಪ್ರಮುಖ ವ್ಯಾಪಾರ ಗ್ರೂಪ್ ಆಗಿರುವ ಟಾಟಾ ಗ್ರೂಪ್ (Tata Group) ಹೊಸ ಸಾಧನೆ ಮಾಡಿದೆ.
30 ಲಕ್ಷ ಕೋಟಿ ರೂ ಮಾರ್ಕೆಟ್ ಕ್ಯಾಪ್ ಅಥವಾ ಷೇರುಸಂಪತ್ತು (Market Cap) ಹೊಂದಿದ ಭಾರತದ ಮೊದಲ ಕಂಪನಿ ಎಂಬ ದಾಖಲೆಯನ್ನು ಸದ್ಯ ಈ ಗ್ರೂಪ್ ಮಾಡಿದೆ. ಈ ಸಂಸ್ಥೆಗೆ ಸೇರಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಟಾಟಾ ಪವರ್, ಟಾಟಾ ಮೋಟಾರ್ಸ್ ಮೊದಲಾದ ಕಂಪನಿಗಳ ಷೇರುಬೆಲೆ ಈ ವರ್ಷ ಹೆಚ್ಚಾಗಿವೆ. ಈ ಮೂಲಕ ಇದರ ಒಟ್ಟಾರೆ ಮಾರುಕಟ್ಟೆ ಬೆಲೆ 30 ಲಕ್ಷ ಕೋಟಿ ರೂ ಗಡಿ ದಾಟಿದೆ. ಗ್ರೂಪ್ ಗೆ ಸೇರಿದ 40ಕ್ಕೂ ಅಧಿಕ ಕಂಪನಿಗಳಿವೆ. ಲಕ್ಷಾಂತರ ಜನರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 24 ಕಂಪನಿಗಳು ಷೇರು ಮಾರುಕಟ್ಟೆಯ ಪಟ್ಟಿಯಲ್ಲಿವೆ. ಎಲ್ಲ ಕಂಪನಿಗಳ ಷೇರುಗಳ ಮೊತ್ತ 30 ಲಕ್ಷ ಕೋಟಿ ರೂ. ದಾಟಿರುವುದು ದೊಡ್ಡ ಸಾಧನೆಯಾಗಿದೆ.
ವೈಯಕ್ತಿಕ ಕಂಪನಿಯ ಷೇರುಮೊತ್ತ ಪರಿಗಣಿಸಿದರೆ ವಿಶ್ವದಲ್ಲಿ 65ನೇ ಸ್ಥಾನ ಸಿಗಲಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಷೇರುಮೊತ್ತ 232.70 ಬಿಲಿಯನ್ ಡಾಲರ್ ಇದೆ. ಜಾಗತಿಕವಾಗಿ 42ನೇ ಸ್ಥಾನದಲ್ಲಿದೆ. ಟಾಟಾ ಗ್ರೂಪ್ನ ಒಟ್ಟಾರೆ ಷೇರು ಸಂಪತ್ತನ್ನು ಈ ಪಟ್ಟಿಗೆ ಸೇರಿಸಿದರೆ 24ನೇ ಸ್ಥಾನ ಲಭಿಸಲಿದೆ.