MI vs CSK Match | ಚೆನ್ನೈ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಮುಂಬೈ
ಇಂಡಿಯನ್ ಪ್ರಿಮಿಯರ್ ಲೀಗ್ ನ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯ ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆಯುತ್ತಿದೆ. ಈ ಎರಡು ತಂಡಗಳು ಈ ಸೀಸನ್ ನಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.
ಮೊದಲ ಬಾರಿಗೆ ಈ ತಂಡಗಳು ಸೆಣಸಿದ್ದಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರು ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು.
ಹೀಗಾಗಿ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೇಡು ತೀರಿಸಿಕೊಳ್ಳುತ್ತಾ ಕಾದು ನೋಡಬೇಕಾಗಿದೆ.
ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈ ಸೀಸನ್ ನಲ್ಲಿ ಈ ವರೆಗೂ 11 ಪಂದ್ಯಗಳನ್ನಾಡಿದೆ.
ಇದರಲ್ಲಿ ನಾಲ್ಕು ಪಂದ್ಯಗಳಲ್ಲಿ ಚೆನ್ನೈ ಗೆಲುವು ಸಾಧಿಸಿದ್ದು, ಏಳು ಪಂದ್ಯಗಳಲ್ಲಿ ಸೋಲು ಕಂಡಿದೆ.
ಹೀಗಾಗಿ 8 ಅಂಕಗಳೊಂದಿಗೆ ಚೆನ್ನೈ ತಂಡ ಸದ್ಯ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಇತ್ತ ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡ ಈ ಆವೃತ್ತಿಯಲ್ಲಿ ಈವರೆಗೂ 11 ಪಂದ್ಯಗಳನ್ನಾಡಿದೆ. ಇದರಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಒಂಭತ್ತು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕು ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಿತ್ತು. ಈ ಪಂದ್ಯದಲ್ಲಿ ಚೆನ್ನೈ ತಂಡ 91 ರನ್ ಗಳಿಂದ ಭರ್ಜರಿ ಗೆಲುವು ದಾಖಲಿಸಿತ್ತು. ಆರಂಭಿಕರಾದ ರುತುರಾಜ್ ಗಾಯಕ್ವಾಡ್ 41ರನ್, ದೆವೊನ್ ಕಾನ್ವೇ 87 ರನ್ ಗಳನ್ನು ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮತ್ತೊಂದು ಕಡೆಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮುಂಬೈ 52 ರನ್ ಗಳಿಂದ ಸೋಲು ಕಂಡಿದ್ದು, ಇಶಾನ್ ಕಿಶನ್ 51 ರನ್ ಗಳಿಸಿದ್ದರು.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವು ಆರಂಭಿಕರ ಪ್ರದರ್ಶನದ ಮೇಲೆ ನಿಂತಿದೆ. ಡೆವೋನ್ ಕಾನ್ವೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಇವರಿಗೆ ರುತುರಾಜ್ ಕೂಡ ಉತ್ತಮ ಸಾಥ್ ನೀಡುತ್ತಿದ್ದಾರೆ.
ಆದ್ರೆ ಒನ್ ಡೌನ್ ನಲ್ಲಿ ಬರುವ ರಾಬಿನ್ ಉತ್ತಪ್ಪ ಆರಂಭದಲ್ಲಿ ನೀಡಿದ ಪ್ರದರ್ಶನವನ್ನು ಈಗ ನೀಡುತ್ತಿಲ್ಲ. ಇನ್ನು ಮಿಡಲ್ ಆರ್ಡರ್ ನಲ್ಲಿ ಅಂಬಾಟಿ ರಾಯುಡು, ಮೊಯಿನ್ ಅಲಿ ತಂಡಕ್ಕೆ ನೆರವಾಗುತ್ತಿದ್ದಾರೆ.
ಇವರು ಜವಾಬ್ದಾರಿಯುತವಾಗಿ ಬ್ಯಾಟ್ ಬೀಸುತ್ತಿರುವುದು ತಂಡದ ಪ್ಲಸ್ ಪಾಯಿಂಟ್ ಆಗಿದೆ. ಶಿವಂ ದುಬೆ ಮತ್ತು ಎಂ.ಎಸ್.ಧೋನಿ ತಂಡದ ಫಿನಿಷರ್ ಗಳಾಗಿದ್ದಾರೆ.
ಬೌಲಿಂಗ್ ವಿಚಾರಕ್ಕೆ ಬಂದರೇ ಮಹೀಶ್ ತೀಕ್ಷಣ, ಮುಖೇಶ್ ಚೌಧರಿ ಚೆನ್ನೈ ತಂಡದ ಟ್ರಂಪ್ ಕಾರ್ಡ್ ಬೌಲರ್ ಗಳಾಗಿದ್ದಾರೆ. ಪ್ರತಿ ಪಂದ್ಯದಲ್ಲೂ ಈ ಇಬ್ಬರೂ ವಿಕೆಟ್ ಬೇಟೆಯಾಡುತ್ತಿದ್ದಾರೆ.
ಇವರಿಗೆ ಡ್ವೇನ್ ಬ್ರಾವೋ, ಸಿಮರ್ ಜೀತ್ ಸಿಂಗ್ ಉತ್ತಮ ಸಾಥ್ ನೀಡಬೇಕಿದೆ. ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡಿದ್ದು, ಅವರು ಈ ಬಾರಿ ಐಪಿಎಲ್ ಟೂರ್ನಿಯಿಂದಲೇ ಹೊರನಡೆದಿದ್ದಾರೆ.
ಇತ್ತ ಮುಂಬೈ ಇಂಡಿಯನ್ಸ್ ವಿಚಾರಕ್ಕೆ ಬಂದರೇ ತಂಡದಲ್ಲಿ ಒಗ್ಗಟ್ಟಿನ ಸಮಸ್ಯೆ ಕಾಡುತ್ತಿದೆ. ಒಂದು ಪಂದ್ಯದಲ್ಲಿ ಬ್ಯಾಟರ್ ಗಳು ಮಿಂಚಿದರೇ ಬೌಲರ್ ಗಳು ಕೈ ಕೊಡುತ್ತಿದ್ದಾರೆ. ಬೌಲರ್ ಗಳು ಮಿಂಚಿದ್ರೆ ಬ್ಯಾಟರ್ ಗಳು ಕೈ ಕೊಡುತ್ತಿದ್ದಾರೆ.
ಆದ್ರೂ ಇಶಾನ್ ಕಿಶನ್ ಸ್ಥಿರ ಆಟವಾಡುತ್ತಿದ್ದಾರೆ. ರೋಹಿತ್ ಶರ್ಮಾ ಅಸ್ಥಿರ ಬ್ಯಾಟಿಂಗ್ ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸಿದೆ. ತಿಲಕ್ ವರ್ಮಾ ಒಬ್ಬರೇ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಟೀಮ್ ಡೆವಿಡ್ ಹೊಸ ಭರವಸೆಯನ್ನು ತುಂಬುತ್ತಿದ್ದಾರೆ.
ಆದ್ರೆ ಕಿರಾನ್ ಪೊಲಾರ್ಡ್ ಬ್ಯಾಟಿಂಗ್, ಬೌಲಿಂಗ್ ನಲ್ಲಿ ವಿಫಲರಾಗುತ್ತಿರೋದು ಮುಂಬೈ ತಂಡಕ್ಕೆ ದೊಡ್ಡ ತಲೆನೋವು ಉಂಟು ಮಾಡಿದೆ.
ಡೆನಿಯಲ್ ಸ್ಯಾಮ್ಸ್, ಜಸ್ಪ್ರೀತ್ ಬೂಮ್ರಾ ಫಾರ್ಮ್ ನಲ್ಲಿರುವುದು ತಂಡಕ್ಕೆ ನೆಮ್ಮದಿಯನ್ನು ತಂದೊಡ್ಡಿದೆ. ಇವರಿಗೆ ರಮಣ್ ದೀಪ್ ಸಿಂಗ್, ಮುರುಗನ್ ಅಶ್ವಿನ್, ರಿಲೆ ಮೆರೆಡಿತ್, ಕುಮಾರ್ ಕಾರ್ತಿಕೇಯ ಉತ್ತಮ ಸಾಥ್ ನೀಡಬೇಕಾಗಿದೆ. TATA IPL 2022 CSK vs MI match Prediction