Technology News : ಕರ್ನಾಟಕದಲ್ಲಿ 3ನೇ ಪವನ ಯಂತ್ರ ವ್ಯವಸ್ಥೆ ಸ್ಥಾಪಿಸಿದ ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ..!!!!
ಬೆಂಗಳೂರು, 24 ಆಗಸ್ಟ್ 2022: ಶುದ್ಧ ಇಂಧನ ವ್ಯವಸ್ಥೆಗಳನ್ನು (ಗಾಳಿ ಹಾಗೂ ಸೌರ) ಹೆಚ್ಚಿಸುವ ಮೂಲಕ ನವೀಕರಿಸಲಾಗದ ಸಂಪನ್ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ತನ್ನ ಪ್ರಯತ್ನಗಳನ್ನು ಮುಂದುವರಿಸಿರುವ ಹೋಂಡಾ ಮೋಟರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ, ಮೂರನೇ ಸ್ಥಾವರ ಹೊಂದಿರುವ ನರಸಾಪುರದಿಂದ (ಕರ್ನಾಟಕ) ಸುಮಾರು 300 ಕಿ.ಮೀ. ದೂರದಲ್ಲಿರುವ ಜಗಳೂರಲ್ಲಿ (ದಾವಣಗೆರೆ ಜಿಲ್ಲೆ, ಕರ್ನಾಟಕ) ತನ್ನ ಮೂರನೇ ವಿಂಡ್ ಟರ್ಬೈನ್ ವ್ಯವಸ್ಥೆಯನ್ನು ಉದ್ಘಾಟಿಸಿದೆ.
130 ಮೀಟರ್ ಎತ್ತರದ, 2.7 ಮೆಗಾವ್ಯಾಟ್ ಪವನ ಯಂತ್ರವು ವಾರ್ಷಿಕವಾಗಿ 75 ಲಕ್ಷ ಕಿಲೊವ್ಯಾಟ್ ಇಂಧನವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು ಈ ಮೂಲಕ ಎಚ್ಎಂಎಸ್ಐನ ನರಸಾಪುರ ಉತ್ಪಾದನಾ ಸ್ಥಾವರವು ವಾರ್ಷಿಕ 5,400 ಟನ್ಗಿಂತ ಅಧಿಕ ಪ್ರಮಾಣದಲ್ಲಿ ಹೊರಸೂಸುವ ಕಾರ್ಬನ್ ಅನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಎಚ್ಎಂಎಸ್ಐ ಈಗ, ಗುಜರಾತ್ನ ರಾಧನ್ಪುರ್ (2 ಮೆಗಾವ್ಯಾಟ್ ಸಾಮರ್ಥ್ಯ) ಮತ್ತು ಭನವಾಡ್ (2.7 ಮೆಗಾವ್ಯಾಟ್ ಸಾಮರ್ಥ್ಯ) ಒಳಗೊಂಡಂತೆ ತನ್ನ ಸಂಸ್ಥಾಪಿತ ವಿಂಡ್ ಟರ್ಬೈನ್ ವ್ಯವಸ್ಥೆಗಳಿಂದ ಒಟ್ಟು 7.4 ಎಂಡಬ್ಲ್ಯು ಪವನ ಶಕ್ತಿಯನ್ನು ಉತ್ಪಾದಿಸಲಿದೆ.
ನವೀಕರಿಸಬಹುದಾದ ಇಂಧನಗಳ ಬಳಕೆಯತ್ತ ಎಚ್ಎಂಎಸ್ಐ ಉಪಕ್ರಮಗಳ ಬಗ್ಗೆ ಮಾತನಾಡಿದ ಹೋಂಡಾ ಮೋಟರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಆಡಳಿತ ನಿರ್ದೇಶಕರು, ಅಧ್ಯಕ್ಷರು ಮತ್ತು ಸಿಇಒ, ಶ್ರೀ ಅತ್ಸುಷಿ ಒಗಾಟಾ, ʻʻಎಚ್ಎಎಂಎಸ್ಐ ಆರಂಭದಿಂದಲೂ ಉತ್ಪಾದನೆಗಳ ಎಲ್ಲ ವಿಚಾರಗಳಲ್ಲಿ ಶುದ್ಧ ಹಾಗೂ ಪರಿಸರ-ಸ್ನೇಹಿ ತಂತ್ರಜ್ಞಾನಗಳನ್ನು ಸಮನ್ವಯಗೊಳಿಸಲು ಬದ್ಧವಾಗಿದೆ. ನರಸಾಪುರದ ಸ್ಥಾವರದಲ್ಲಿ ವಿಂಡ್ ಟರ್ಬೈನ್ ಸ್ಥಾಪನೆಯಿಂದಾಗಿ ಎಲ್ಲ ಉತ್ಪಾದನೆಗಳು ಮತ್ತು ಚಟುವಟಿಕೆಗಳಲ್ಲಿ 2050ರ ಹೊತ್ತಿಗೆ ಕಾರ್ಬನ್ ತಾಟಸ್ಥ್ಯದ ಪರಿಸರ ಗುರಿಯನ್ನು ಸಾಧಿಸುವತ್ತ ನಾವು ಇನ್ನಷ್ಟು ಸಮೀಪ ಸಾಗಿದ್ದೇವೆ. ಇಂಧನ ದಕ್ಷತೆ ತಂತ್ರಜ್ಞಾನಗಳ ಮೂಲಕ; ಮತ್ತು ನವೀಕರಿಸಬಹುದಾದ ಇಂಧನ ಉಪಕ್ರಮಗಳ ಮೂಲಕ ಕಾರ್ಬನ್ ತಗ್ಗಿಸುವ ನಮ್ಮ ದೂರದೃಷ್ಟಿಯನ್ನು ಇನ್ನಷ್ಟು ಬಲಪಡಿಸುವುದನ್ನು ನಾವು ಮುಂದುವರಿಸುತ್ತೇವೆʼʼ.
ಭವಿಷ್ಯದ ತಲೆಮಾರುಗಳ ಸುಸ್ಥಿರತೆಗಾಗಿ ಸೌರ ಮತ್ತು ಪವನ ಇಂಧನಗಳ ಬಳಕೆ
ನವೀಕರಿಸಬಹುದಾದ ಇಂಧನದ ಧೋರಣೆಯನ್ನು ವಿಶಾಲಗೊಳಿಸುವ ನಿಟ್ಟಿನಲ್ಲಿ ಎಚ್ಎಂಎಸ್ಐ ಸತತವಾಗಿ ಇಂಧನ ಉತ್ಪಾದನೆಯಲ್ಲಿ ಸುಸ್ಥಿರ ಸಂನ್ಮೂಲಗಳನ್ನು ಹೂಡಿಕೆ ಮಾಡುತ್ತಿದೆ. ಒಟ್ಟು 67 ಎಂಡಬ್ಲ್ಯು ನವೀಕರಿಸಬಹುದಾದ ಇಂಧನ ಸಾಮರ್ಥ್ಯದೊಂದಿಗೆ, ದೇಶದಾದ್ಯಂತವಿರುವ ಎಲ್ಲ ಎಚ್ಎಂಎಸ್ಐ ಉತ್ಪಾದನಾ ಘಟಕಗಳು ವೈವಿಧ್ಯಮಯ ಇಂಧನ ಅಗತ್ಯಗಳನ್ನು ಈಡೇರಿಸುವ ಸಲುವಾಗಿ ಈ ಇಂಧನವನ್ನು ಬಳಸಿಕೊಳ್ಳುತ್ತವೆ. 2021-22ನೇ ಹಣಕಾಸು ವರ್ಷದಲ್ಲಿ ಎಚ್ಎಂಎಸ್ಐ ನವೀಕರಿಸಬಹದಾದ ಸಂಪನ್ಮೂಲಗಳಿಂದ ಉತ್ಪಾದನೆಯಾದ ವಿದ್ಯುತ್ನಲ್ಲಿ 87 ಮಿಲಿಯ ಕೆಡಬ್ಲ್ಯುಎಚ್ ಯುನಿಟ್ಗಳನ್ನು ಬಳಸಿಕೊಂಡಿದೆ.
ಕರ್ನಾಟಕದ ನರಸಾಪುರದ ಎಚ್ಎಂಎಸ್ಐ ಸ್ಥಾವರವು 2017ರಲ್ಲಿ ಥರ್ಡ್ ಪಾರ್ಟಿ ಪವರ್ ಪರ್ಚೇಸ್ ಅಗ್ರಿಮೆಂಟ್ ಮೂಲಕ ನವೀಕರಿಸಬಹುದಾದ ಇಂಧನ ಖರೀದಿ ಪ್ರಕ್ರಿಯೆ ಆರಂಭಿಸಿದೆ. ಅದಲ್ಲದೆ, ಪರಿಸರ ಶ್ರೇಷ್ಠತೆಯ ನಾಯಕತ್ವವನ್ನು ಉಳಿಸಿಕೊಳ್ಳುತ್ತಾ ನರಸಾಪುರ ಸ್ಥಾವರವು 2019ರಲ್ಲಿ 7 ಎಂಡಬ್ಲ್ಯು ಸಾಮರ್ಥ್ಯದ ಛಾವಣಿ ಮೇಲಿನ (ರೂಫ್ ಟಾಪ್) ಸೌರ ಶಕ್ತಿ ಸ್ಥಾವರವನ್ನು ಪ್ರತಿಷ್ಠಾಪಿಸಿದ್ದು ಅದನ್ನು ನಂತರ 9.5 ಎಂಡಬ್ಲ್ಯುಗೆ ವಿಸ್ತರಿಸಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ, ಅದು ಉಷ್ಣ (ಕಲ್ಲಿದ್ದಲು) ವಿದ್ಯುತ್ಗೆ ಪರ್ಯಾಯವಾಗಿ 300 ಸೌರ ವಿದ್ಯುತ್ ಚಾಲಿತ ಅಡುಗೆ ಪಾತ್ರೆಗಳನ್ನು ಹೊಂದಿದೆ. ಈಗ ಹೊಸದಾಗಿ 2.7 ಎಂಡಬ್ಲ್ಯು ಪವನ ಟರ್ಬೈನ್ನೊಂದಿಗೆ ಸ್ಥಾವರದ ಸಂಯೋಜಿತ ನವೀಕರಣ ಇಂಧನ ಸಾಮರ್ಥ್ಯ 42 ಎಂಡಬ್ಲ್ಯುಗಿಂತ ಹೆಚ್ಚಾಗಿದೆ ಹಾಗೂ ಅದರ ಒಟ್ಟು ವಿದ್ಯುತ್ ಅವಶ್ಯಕತೆಯಲ್ಲಿ ಶೇಕಡ 95ರಷ್ಟನ್ನು ಪೂರೈಸುತ್ತದೆ. ಇದರಿಂದ ಪ್ರತಿ ವರ್ಷ 44,000 ಟನ್ಗೂ ಅಧಿಕ ಕಾರ್ಬನ್ ಹೊರಸೂಸುವುದನ್ನು ತಡೆಯಬಹುದಾಗಿದೆ. ಆ ಮೂಲಕವಾಗಿ ನರಸಾಪುರ ಸ್ಥಾವರವು ಕಾರ್ಬನ್ ಹೊರಸೂಸುವಿಕೆ ತಗ್ಗಿಸುವಲ್ಲಿ ಏಷ್ಯಾ ಮತ್ತು ಓಷಿಯಾನಿಯಾ ವಲಯದಲ್ಲಿನ ಕಂಪನಿಯ ಸಮೂಹದಲ್ಲಿ ಹೊಂದಿರುವ ಮುಂಚೂಣಿ ಸ್ಥಾನವನ್ನು ಮುಂದುವರಿಸಲಿದೆ.